ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ತ್ರಾಸಿ ಅರಬ್ಬಿ ಸಮುದ್ರದಲ್ಲಿ ಶನಿವಾರ ಸಂಜೆ ಅಲೆಗಳ ಅಬ್ಬರಕ್ಕೆ ಜಟ್ ಸ್ಕೀ ಪಲ್ಟಿಯಾಗಿ ನಾಪತ್ತೆಯಾಗಿದ್ದ ರೈಡರ್ ಮೃತದೇಹ ಸೋಮವಾರ ನಸುಕಿನ ಜಾವ ತ್ರಾಸಿ ಸಮೀಪದ ಹೊಸಪೇಟೆ ಕಡಲತೀರದಲ್ಲಿ ಪತ್ತೆಯಾಗಿದೆ.ಜಟ್ ಸ್ಕೀ ರೈಡ್ ನಡೆಸುತ್ತಿದ್ದ ರೈಡರ್, ಮೂಲತಃ ಮುರ್ಡೇಶ್ವರದ ರೋಹಿದಾಸ್ ಅಲಿಯಾಸ್ ರವಿ (41) ಮೃತ ದುರ್ದೈವಿ.ತ್ರಾಸಿ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಅರಬ್ಬಿ ಸಮುದ್ರದ ಕಡಲ ಕಿನಾರೆಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸಮುದ್ರದ ಮೋಜನ್ನು ತೋರಿಸಲು ಖಾಸಗಿ ಜಟ್ ಸ್ಕೀ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರಶಾಂತ್ (25) ಎನ್ನುವ ಪ್ರವಾಸಿಗ ಜಟ್ ಸ್ಕೀ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬಂದ ಭಾರಿ ಗಾತ್ರದ ಅಲೆಯಲ್ಲಿ ಆಯಾ ತಪ್ಪಿ ಪಲ್ಟಿ ಆಗಿತ್ತು. ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದಿದ್ದರು. ಘಟನೆ ವೇಳೆ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದು, ಜಾಕೆಟ್ ಧರಿಸದ ರೈಡರ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ನಾಪತ್ತೆಯಾದ ರೋಹಿದಾಸ್ ಅವರ ಪತ್ತೆಗಾಗಿ ಸತತ ಶೋಧ ಕಾರ್ಯ ನಡೆಸಲಾಗಿತ್ತು. ಶನಿವಾರ ಸಂಜೆ ಹಾಗೂ ಭಾನುವಾರ ದಿನವಿಡೀ ಗಂಗೊಳ್ಳಿ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಕಾವಲು ಪಡೆಯ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು, ಈಜುಪಟು ದಿನೇಶ್ ಖಾರ್ವಿ ನೇತೃತ್ವದ ತಂಡ ಶೋಧ ಕಾರ್ಯದಲ್ಲಿ ತೊಡಗಿತ್ತು.36 ಗಂಟೆಗಳ ಬಳಿಕ ಪತ್ತೆ:ಸೋಮವಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಸ್ಥಳೀಯ ಮೀನುಗಾರರಾದ ಶೇಷು ಖಾರ್ವಿ ಹಾಗೂ ಮೋಹನ ಖಾರ್ವಿ ಮೀನುಗಾರಿಕೆಗೆ ತೆರಳುತ್ತಿರುವ ಸಂದರ್ಭ ಹೊಸಪೇಟೆಯ ರುದ್ರಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಸರಿಸುಮಾರು 36 ಗಂಟೆಗಳ ಬಳಿಕ ರೋಹಿದಾಸ್ ಮೃತದೇಹ ಪತ್ತೆಯಾಗಿದೆ. ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಮೀನುಗಾರರು, ಸ್ಥಳೀಯ ಕರಾವಳಿ ಕಾವಲು ಪಡೆ ಹಾಗೂ ಗಂಗೊಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗೊಳ್ಳಿ 24x7 ಆಂಬ್ಯುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ, ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿ, ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, ರೋಹಿದಾಸ್ ಸಹೋದ್ಯೋಗಿಗಳು ಶವವನ್ನು ಮೇಲಕ್ಕೆತ್ತಲು ಸಹಕರಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.