ಸ್ವಉದ್ಯೋಗದಿಂದ ನಾರಿಶಕ್ತಿ ಬಲಗೊಳ್ಳಲಿ

| Published : Feb 09 2024, 01:45 AM IST

ಸಾರಾಂಶ

ಜನರಿಗೆ ಉಚಿತ ಕೊಡುವುದಕ್ಕಿಂತ ಖಚಿತವಾದುದ್ದನ್ನು ಕೊಡಬೇಕು. ಜನರು ಒಂದಿಲ್ಲೊಂದು ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು

ಅಳ್ನಾವರ: ಗೃಹಿಣಿಯರು ಸ್ವ ಉದ್ಯೋಗಿಗಳಾಗುವ ಮೂಲಕ ಸಮಾಜದಲ್ಲಿನ ನಾರಿಶಕ್ತಿಯು ಬಲಗೊಳ್ಳಬೇಕು ಎಂದು ಜ್ಯೋತಿ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದುರೀತಿಯ ಕೌಶಲ್ಯ ಅಡಕವಾಗಿರುತ್ತದೆ. ಮಹಿಳೆಯರು ಅವುಗಳನ್ನು ಬಳಸಿಕೊಳ್ಳುವ ಮೂಲಕ ಸ್ವಯಂ ಉದ್ಯೋಗಿಗಳಾಗುವದಷ್ಟೆ ಅಲ್ಲದೆ ಆರ್ಥಿಕವಾಗಿಯೂ ಸ್ವಾವಲಂಬಿಗಳಾಗುವಿರಿ. ಪ್ರತಿಯೊಂದು ಮನೆಯಲ್ಲಿಯೂ ಒಂದು ಉದ್ಯೋಗ ಬೆಳೆದರೆ ಆ ಕುಟುಂಬವು ಸ್ವಾವಲಂಬಿಯಾಗಿ ಬದುಕುತ್ತದೆ. ದೇಶದಲ್ಲಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರದಲ್ಲಿ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಈ ಯೋಜನೆಯ ಫಲಾನುಭವಿಗಳಾಗಬೇಕು ಎಂದು ಹೇಳಿದರು.

ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಜನರಿಗೆ ಉಚಿತ ಕೊಡುವುದಕ್ಕಿಂತ ಖಚಿತವಾದುದ್ದನ್ನು ಕೊಡಬೇಕು. ಜನರು ಒಂದಿಲ್ಲೊಂದು ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು. ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಮಹಿಳೆಯ ಶ್ರಮ ಬರೀ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ದೇಶದ ಉತ್ಪಾದನಾ ರಂಗದಲ್ಲಿಯೂ ಛಾಪು ಮೂಡಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದರು.

ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಜಗದೀಶ ನಾಯಕ್, ಜೆಎಸ್‌ಡಬ್ಲ್ಯೂ ಕಂಪನಿ ಮುಖ್ಯಸ್ಥ ಪೆದ್ದಣ್ಣ ಮತ್ತು ಹಿಂಡಾಲಕೋ ಕಂಪನಿ ಮುಖ್ಯಸ್ಥ ದಿನೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂತರ ಕಲಿಕಾರ್ಥಿಗಳಿಗೆ ಹೊಲಗೆಯಂತ್ರ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಕಲ್ಮೇಶ ಬೇಲೂರ, ನಾರಾಯಣ ಮೋರೆ, ಲಿಂಗರಾಜ ಮೂಲಿಮನಿ, ಸಂಜಯ ಚಂದರಗಿಮಠ, ಶಿವಾಜಿ ಡೊಳ್ಳಿನ, ಪ್ರವೀಣ ಪವಾರ, ಮಂಗಳಾ ರವಳಪ್ಪನವರ, ಮದನ್ ಕುಲಕರ್ಣಿ, ಅಜೀಜ್‌ ದೇವರಾಯ, ಲಖನ್ ಬರಗುಂಡಿ, ಪರಶುರಾಮ ಪಾಲಕರ, ಅರ್ಜುನ ಬೆನ್ನಳ್ಳಿ ಮತ್ತಿತರರು ಇದ್ದರು.