12ರಿಂದ ಜಿಲ್ಲಾದ್ಯಂತ ಜ್ಯೋತಿ ರಥಯಾತ್ರೆ ಸಂಚಾರ

| Published : Feb 03 2024, 01:46 AM IST

ಸಾರಾಂಶ

ಬಾಗಲಕೋಟೆ: ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯೋತ್ಸವ ಸಂದರ್ಭದಲ್ಲಿ ಚಾಲನೆ ನೀಡಲಾಗಿರುವ ಜ್ಯೋತಿ ರಥಯಾತ್ರೆ ಫೆ.12 ರಿಂದ 27ರವರೆಗೆ ಜಿಲ್ಲಾದ್ಯಂತ ಸಂಚರಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜ್ಯೋತಿ ರಥಯಾತ್ರೆ ಸಂಚಾರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಸಂಭ್ರಮ-50 ಹೆಸರಾಯಿತು, ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆ ಜಿಲ್ಲೆಯ ಹುನುಗುಂದ ತಾಲೂಕಿನಿಂದ ಪ್ರಾರಂಭವಾಗಿ ರಬಕವಿ-ಬನಹಟ್ಟಿ ತಾಲೂಕಿನವರೆಗೆ ಸಂಚರಿಸಲಿದ್ದು, ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯೋತ್ಸವ ಸಂದರ್ಭದಲ್ಲಿ ಚಾಲನೆ ನೀಡಲಾಗಿರುವ ಜ್ಯೋತಿ ರಥಯಾತ್ರೆ ಫೆ.12 ರಿಂದ 27ರವರೆಗೆ ಜಿಲ್ಲಾದ್ಯಂತ ಸಂಚರಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜ್ಯೋತಿ ರಥಯಾತ್ರೆ ಸಂಚಾರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಸಂಭ್ರಮ-50 ಹೆಸರಾಯಿತು, ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆ ಜಿಲ್ಲೆಯ ಹುನುಗುಂದ ತಾಲೂಕಿನಿಂದ ಪ್ರಾರಂಭವಾಗಿ ರಬಕವಿ-ಬನಹಟ್ಟಿ ತಾಲೂಕಿನವರೆಗೆ ಸಂಚರಿಸಲಿದ್ದು, ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರಥಯಾತ್ರೆ ಸಂಚಾರದಲ್ಲಿ ಆಯಾ ತಾಲೂಕಿನ ಜನಪ್ರತಿನಿಧಿಗಳು, ಸಾಹಿತಿಗಳು, ಕನ್ನಡ ಪರ ಒಕ್ಕೂಟಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಿ ಹಬ್ಬದ ವಾತಾವರಣದಂತೆ ಸ್ವಾಗತ ಮಾಡಿಕೊಂಡು ಮುಂದಿನ ತಾಲೂಕಿಗೆ ಬೀಳ್ಕೊಡುವ ಕಾರ್ಯವಾಗಬೇಕು ಎಂದು ತಿಳಿಸಿದರು.

ನಾಡುನುಡಿಗೆ ಸಂಬಂಧಿಸಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕನ್ನಡ ಸಂದೇಶ ಸಾರುವ ಚಿತ್ರಪಟಗಳು, ಘೋಷ ವಾಕ್ಯಗಳು, ವೇಷಭೂಷಣಗಳ ಮೆರವಣಿಗೆಯ ಸಂಭ್ರಮದ ವಾತಾವರಣದೊಂದಿಗೆ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ ಎಂದರು.

ರಥಯಾತ್ರೆ ಸಂಚರಿಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು. ರಥದ ಸಿಬ್ಬಂದಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಿ. ಒಟ್ಟಾರೆ ಜ್ಯೋತಿ ರಥಯಾತ್ರೆ ಸಂಚಾರ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹಾಗೂ ವಿವಿಧ ಕನ್ನಡಪರ ಸಂಘನೆಗಳ ಪದಾಧಿಕಾರಿಗಳು ಇದ್ದರು.