ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಈ ಶಾಲಾ ಮಕ್ಕಳಿಗೆ ಕುಳಿತುಕೊಳ್ಳಲು ಕೊಠಡಿಯಿಲ್ಲ. ಶಾಲೆಯ ಕಟ್ಟೆ ಮತ್ತು ಮರದ ನೆರಳಲ್ಲಿ ಅಕ್ಷರಭ್ಯಾಸ ಮಾಡುವ ದುಸ್ಥಿತಿ ಬಂದಿದೆ. ಶುದ್ಧ ಕುಡಿಯುವ ನೀರಿಲ್ಲ. ಹೆಸರಿಗೊಂದು ಶೌಚಾಲಯ, ಆಟದ ಮೈದಾನವಂತೂ ಇಲ್ಲವೇ ಇಲ್ಲ, ಇದೊಂದು ಸರ್ಕಾರಿ ಶಾಲೆ!

ಇದು ತಾಲೂಕಿನ ಕೆ.ಅಯ್ಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ. ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೂ ಇಂಗ್ಲಿಷ್‌ ಮಾಧ್ಯಮ ಹಾಗೂ 1ನೇ ತರಗತಿಯಿಂದ 8ನೇ ತರಗತಿ ವರೆಗೂ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಲಾಗುತ್ತಿದೆ.

288 ಮಕ್ಕಳು ಬೀದಿಯಲ್ಲಿ:

ಸದ್ಯ ಇಲ್ಲಿ 288 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಮಕ್ಕಳ ದಾಖಲಾತಿ ಇನ್ನೂ ಮುಂದುವರಿದಿದೆ. ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ತರಗತಿ ಸೇರಿ ಒಟ್ಟು 13 ಕೊಠಡಿಗಳ ಅಗತ್ಯವಿದೆ. ಆದರೆ, 6 ಕೊಠಡಿಗಳು ಮಾತ್ರ ಇವೆ. ಮಳೆ ಬಂದಾಗ ಸೋರುವ ಕೊಠಡಿಗಳಿಗೆ ಅಕ್ಷರ ಆವಿಷ್ಕಾರ ಯೋಜನೆಯಡಿ ಕೊಠಡಿಯ ಚಾವಣಿಗೆ ತಗಡುಗಳನ್ನು ಹಾಕಲಾಗಿದೆ. ಒಟ್ಟು ಶಾಲೆಗೆ 7 ಕೊಠಡಿಗಳ ಕೊರತೆ ಕಾಡುತ್ತಿದೆ.


ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳಿಗೆ ಕುಳಿತುಕೊಳ್ಳಲು ಜಾಗವೇ ಇಲ್ಲ. ಇದರಿಂದ ಕೊಠಡಿಗಳ ಮುಂದಿನ ಕಟ್ಟೆಯ ಪಕ್ಕದ ಗೋಡೆಗೆ ಕಪ್ಪು ಬಣ್ಣ ಬಳಿದು ಅದನ್ನೇ ಬೋರ್ಡ್‌ ಮಾಡಲಾಗಿದೆ. ಕೊಠಡಿಗಳ ಕೊರತೆಯಿಂದ ವಿಧಿ ಇಲ್ಲದೇ ಶಿಕ್ಷಕರು ನಿರಂತರವಾಗಿ, 5 ತರಗತಿಗಳ ಮಕ್ಕಳಿಗೆ ಕಟ್ಟೆಯ ಮೇಲೆ ಮತ್ತು ಮರದ ನೆರಳಿನಲ್ಲಿ ಪಾಠ ಮಾಡುತ್ತಾರೆ.

ಕೆ.ಅಯ್ಯನಹಳ್ಳಿ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ಮಂಜೂರಾದರೆ ಕೊಠಡಿಗಳ ನಿರ್ಮಾಣಕ್ಕೆ ಜಾಗವೇ ಇಲ್ಲ. ಹಾಲಿ ಇರುವ ಕೊಠಡಿಗಳು ತನ್ನ ಸಾಮರ್ಥ್ಯ ಕಳೆದುಕೊಂಡು ಕುಸಿದು ಬೀಳುವ ಹಂತಕ್ಕೆ ಬಂದಿವೆ. ಇಂತಹ ಕೊಠಡಿಗಳ ಮೇಲೆ ಹೊಸ ಕೊಠಡಿ ನಿರ್ಮಾಣ ಕಷ್ಟಸಾಧ್ಯ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಶಾಲೆಗೆ ಅಗತ್ಯ ಜಮೀನು ನೀಡಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಒತ್ತಾಯ.

ಈ ಶಾಲೆಗೆ ಮುಖ್ಯ ಗುರು ಸೇರಿ ಒಟ್ಟು 7 ಶಿಕ್ಷಕರಿದ್ದಾರೆ. ಎಲ್‌ಕೆಜಿ, ಯುಕೆಜಿ ತರಗತಿಗೆ 3 ಅತಿಥಿ ಶಿಕ್ಷಕರಿದ್ದಾರೆ. ಹಿಂದಿ ಹಾಗೂ ದೈಹಿಕ ಶಿಕ್ಷಣ ಹುದ್ದೆಗಳು ಖಾಲಿ ಇವೆ.

ಪ್ಲೋರೈಡ್‌ ನೀರು:

ಮಕ್ಕಳಿಗೆ ಶುದ್ಧ ಕುಡಿವ ನೀರಿಲ್ಲದೇ ಪ್ಲೋರೈಡ್‌ಯುಕ್ತ ಕೊಳವೆ ಬಾವಿ ನೀರು ಕುಡಿಯುತ್ತಿದ್ದಾರೆ. ಕಿರಿದಾದ ಬಯಲು ಜಾಗವೇ ಮಕ್ಕಳಿಗೆ ಆಟದ ಮೈದಾನ. ಒಂದೇ ಶೌಚಾಲಯವಿದೆ. ಇಂತಹ ಹಲವು ಮೂಲಭೂತ ಸೌಲಭ್ಯಗಳ ಕೊರತೆ ಮಧ್ಯೆ ಹಳ್ಳಿ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಗೆ ಒಳಪಟ್ಟ ಈ ಸರ್ಕಾರಿ ಶಾಲೆಗೆ ಆಳುವ ಸರ್ಕಾರ, ಕೊಠಡಿಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಬೇಕಿದೆ. ಸೌಲಭ್ಯಗಳಿಲ್ಲದ ಸರ್ಕಾರಿ ಶಾಲೆ ಬಿಟ್ಟು ಗ್ರಾಮೀಣ ಭಾಗದ ಮಕ್ಕಳು, ಖಾಸಗಿ ಶಾಲೆ ಕಡೆಗೆ ಮುಖ ಮಾಡುತ್ತಿರುವುದು ದುರಂತವೇ ಸರಿ.

ಕೊಠಡಿಗಳ ಕೊರತೆಯಿಂದ ಮಕ್ಕಳು ಮರದಡಿ, ಕಟ್ಟೆ ಮೇಲೆ ಪಾಠ ಕೇಳುತ್ತಿದ್ದಾರೆ. ಸರ್ಕಾರ ಶಾಲೆಗೆ ಕೊಠಡಿಗಳ ನಿರ್ಮಾಣಕ್ಕೆ ಅನುದಾನ, ಅಗತ್ಯ ಜಮೀನು ನೀಡಬೇಕು ಎನ್ನುತ್ತಾರೆ ಕೆ.ಅಯ್ಯನಹಳ್ಳಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಬೋವಿ.