ಸಾರಾಂಶ
ಕೊಡಗು ಜಿಲ್ಲೆಯಲ್ಲಿ ಗಣಪತಿ ಅವರು ಹುಟ್ಟಿದ್ದರೂ ಅವರ ಕಾರ್ಯ ಕ್ಷೇತ್ರ ಮೈಸೂರು ಆಗಿತ್ತು. ಬಾಲ್ಯದಿಂದಲೇ ಸಂಸ್ಕಾರವಂತರಾಗಿದ್ದ ಅವರು, ವಕೀಲಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆದರೆ, ಅವರನ್ನು ಪತ್ರಿಕೋದ್ಯಮ ಕೈ ಬೀಸಿ ಕರೆಯಿತು. ಹಾಗಾಗಿ ಮುಂಬೈನಲ್ಲಿ ಪತ್ರಿಕೋದ್ಯಮದ ಡಿಪ್ಲೊಮೋ ಮುಗಿಸಿ ಆ ಕಾಲದಲ್ಲೇ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ದಿನಪತ್ರಿಕೆಗಳ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ ಅವರು ಪತ್ರಿಕೋದ್ಯಮದ ಭೀಷ್ಮನಂತಿದ್ದರು. ಅವರ ಅಗಲಿಕೆಯಿಂದ ಪತ್ರಿಕಾ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್‌ನ ಅಧ್ಯಕ್ಷ ಕೆ.ಟಿ.ಹನುಮಂತು ವಿಷಾದಿಸಿದರು.ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕೃಷಿಕ ಅಲಯನ್ಸ್ ಸಂಸ್ಥೆ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಕೆ.ಬಿ.ಗಣಪತಿ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಗಣಪತಿ ಅವರು ಹುಟ್ಟಿದ್ದರೂ ಅವರ ಕಾರ್ಯ ಕ್ಷೇತ್ರ ಮೈಸೂರು ಆಗಿತ್ತು. ಬಾಲ್ಯದಿಂದಲೇ ಸಂಸ್ಕಾರವಂತರಾಗಿದ್ದ ಅವರು, ವಕೀಲಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆದರೆ, ಅವರನ್ನು ಪತ್ರಿಕೋದ್ಯಮ ಕೈ ಬೀಸಿ ಕರೆಯಿತು. ಹಾಗಾಗಿ ಮುಂಬೈನಲ್ಲಿ ಪತ್ರಿಕೋದ್ಯಮದ ಡಿಪ್ಲೊಮೋ ಮುಗಿಸಿ ಆ ಕಾಲದಲ್ಲೇ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು.ನಂತರ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ತರುವಾಯ ಮೈಸೂರಿಗೆ ಬಂದು ೧೯೭೮ರಲ್ಲಿ ಸ್ಟಾರ್ ಆಫ್ ಮೈಸೂರು ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಸ್ಥಾಪಿಸಿ, ೧೯೮೦ರಲ್ಲಿ ಮೈಸೂರು ಮಿತ್ರ ಕನ್ನಡ ಪತ್ರಿಕೆಯನ್ನು ಸ್ಥಾಪಿಸಿ, ಐದು ಜಿಲ್ಲೆಗೆ ವಿಸ್ತರಣೆ ಮಾಡಿ, ಎರಡು ಪತ್ರಿಕೆಗಳನ್ನು ಓದುಗರ ಸದಭಿರುಚಿಗೆ ತಕ್ಕಂತೆ ನಡೆಸಿಕೊಂಡು ಬಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ರವಿ ಮಾತನಾಡಿ, ಕೆ.ಬಿ.ಗಣಪತಿ ಅವರನ್ನು ಹತ್ತಿರದಿಂದ ಬಲ್ಲವನು ನಾನು. ಮೈಸೂರು ಮಿತ್ರ ದಿನಪತ್ರಿಕೆಯಲ್ಲಿ ಹಲವು ವರ್ಷ ಹಾಗೂ ಆಂದೋಲನ ದಿನಪತ್ರಿಕೆಯಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದೆ. ಆಂದೋಲನ ಪತ್ರಿಕೆಯ ರಾಜಶೇಖರ ಕೋಟಿ ಅವರಿಂದ ಸಾಮಾಜಿಕ ಕಳಕಳಿ ಬಗ್ಗೆ ಕಲಿತರೆ ಗಣಪತಿ ಅವರಿಂದ ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಯನ್ನು ನಾನು ಸೇರಿದಂತೆ ಹಲವು ಪತ್ರಕರ್ತರು ಕಲಿತಿದ್ದೇವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಗಾಯಕಿ ಐಶ್ವರ್ಯ ಎಚ್.ಎಸ್.ವೆಂಕಟೇಶಮೂರ್ತಿ ರಚನೆಯ ‘ತೂಗು ಮಂಚದಲ್ಲಿ ಕೂತು’ ಗೀತೆಯನ್ನು ಹಾಡಿ ಗೀತನಮನ ಸಲ್ಲಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಮಾಜಿ ಅಧ್ಯಕ್ಷ ನವೀನ್, ಖಜಾಂಚಿ ಆರ್.ಎನ್.ನಂಜುಂಡಸ್ವಾಮಿ, ಹಿರಿಯ ಪತ್ರಕರ್ತ ಕಬ್ಬನಹಳ್ಳಿ ಶಂಭು, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್, ಅಸೋಸಿಯೇಷನ್ ಆಫ್ ಅಲಯನ್ಸ್‌ನ ಉಪರಾಜ್ಯಪಾಲ ಚಂದ್ರಶೇಖರ್, ಮೈಸೂರು ಮಿತ್ರ ಜಿಲ್ಲಾ ವರದಿಗಾರ ಎಂ.ಕೆ.ಮೋಹನ್‌ರಾಜ್ ಸೇರಿ ಹಲವು ಪತ್ರಕರ್ತರು, ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.