ಕೆ.ಬಿ. ಬಡಾವಣೆ ಫೇವರ್ಸ್‌ ಕಾಮಗಾರಿಗೆ ವಿರೋಧವಿಲ್ಲ

| Published : Feb 26 2025, 01:01 AM IST

ಸಾರಾಂಶ

ರಸ್ತೆ ಒತ್ತುವರಿ ಮಾಡಿ ನೀರಿನ ಸಂಪ್‌ ನಿರ್ಮಿಸಿದ್ದು, ಅವುಗಳನ್ನು ಉಳಿಸಿಕೊಳ್ಳಲು ಫೇವರ್ಸ್‌ ಕಾಮಗಾರಿಗೆ ಸ್ಥಳೀಯ ನಿವಾಸಿಗಳು ವಿರೋಧಿಸುತ್ತಿದ್ದಾರೆ ಎಂಬುದಾಗಿ ಕೆಲವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ನಗರದ ಕೆ.ಬಿ. ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್‌ ಸುತ್ತಲಿನ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

- ಒಂದೂವರೆ ಅಡಿ ರಸ್ತೆ ಒತ್ತುವರಿ ಮಾಡಿದವರ ತಂಟೆಗೆ ಹೋದ ಗುತ್ತಿಗೆದಾರ: ನಿವಾಸಿಗಳ ಅಸಮಾಧಾನ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಸ್ತೆ ಒತ್ತುವರಿ ಮಾಡಿ ನೀರಿನ ಸಂಪ್‌ ನಿರ್ಮಿಸಿದ್ದು, ಅವುಗಳನ್ನು ಉಳಿಸಿಕೊಳ್ಳಲು ಫೇವರ್ಸ್‌ ಕಾಮಗಾರಿಗೆ ಸ್ಥಳೀಯ ನಿವಾಸಿಗಳು ವಿರೋಧಿಸುತ್ತಿದ್ದಾರೆ ಎಂಬುದಾಗಿ ಕೆಲವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ನಗರದ ಕೆ.ಬಿ. ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್‌ ಸುತ್ತಲಿನ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

ನಗರದ ಕೆ.ಬಿ. ಬಡಾವಣೆಯಲ್ಲಿ ಫೇವರ್ಸ್ ಕಾಮಗಾರಿಗೆ ವಿರೋಧಿಸುತ್ತಿದ್ದಾರೆ ಎಂದು ಕೆಲವರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಆರೇಳು ದಶಕಗಳ ಹಿಂದೆಯೇ ಈ ಭಾಗದಲ್ಲಿ ಮನೆ ನಿರ್ಮಿಸಿದ್ದು, ಕೆಲವರು ಮನೆ ಕಾಂಪೌಂಡ್‌ನಿಂದ ತುಸು ಆಚೆಗೆ ನೀರಿನ ಸಂಪ್‌ ನಿರ್ಮಿಸಿರುವುದು ವಾಸ್ತವ. ಆದರೆ, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ರಾಮಾಂಜನೇಯ ರೆಡ್ಡಿ ನೀರಿನ ಸಂಪ್‌ಗಳನ್ನು ಕಾಂಪೌಂಡ್‌ ಒಳಗೆ ಮಾಡಿಕೊಳ್ಳುವಂತೆ ಏಕಾಏಕಿ ನೀರಿನ ಸಂಪ್‌ ಒಡೆದು ಹಾಕಿದ್ದಾರೆ ಎಂದು ನಿವಾಸಿಗಳಾದ ಸುಬ್ರಹ್ಮಣ್ಯ, ಪ್ರೇಮಲೀಲಾ ಇತರರು ದೂರಿದ್ದಾರೆ.

ನೀರಿನ ಸಂಪ್‌ ಒಡೆದು ಹಾಕಿದರೂ ನಾವು ಏನೂ ಮಾತನಾಡದೇ ಸುಮ್ಮನಿದ್ದೆವು. ಆದರೆ, ಪಾರ್ಕ್‌ ಪಕ್ಕದ ನಿವಾಸಿಯೊಬ್ಬರು ಒಂದೂವರೆ ಅಡಿ ರಸ್ತೆ ಒತ್ತುವರಿ ಮಾಡಿ, ಮನೆ ಕಟ್ಟಿದ್ದಾರೆ. ಅಂತಹವರು ಬಲಾಢ್ಯರೆಂಬ ಕಾರಣಕ್ಕೆ ಗುತ್ತಿಗೆದಾರ ಆ ಮನೆ ಜಾಗ ಬಿಟ್ಟು ಕಾಮಗಾರಿ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ನಾವೆಲ್ಲಾ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆಯೆಂಬಂತೆ ತಾರತಮ್ಯ ಏಕೆಂದು ಪ್ರಶ್ನಿಸಿದ್ದೆವು ಎಂದಿದ್ದಾರೆ.

ಪಾಲಿಕೆ ಆಯುಕ್ತೆಗೆ ದೂರು:

ಫೇವರ್ಸ್ ಹಾಕಲು ರಸ್ತೆಯಿಂದ ಒಂದೂವರೆ ಅಡಿ ಆಳ ತೋಡುತ್ತಿದ್ದು, ಅಷ್ಟು ಆಳದಿಂದ ನಮ್ಮ ಕಾಂಪೌಂಡ್‌ವರೆಗೆ ಸ್ಲ್ಯಾಬ್ ಹಾಕಿಕೊಂಡು, ರಿಪೇರಿ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ತೊಟ್ಟಿ ಸಣ್ಣದಾಗಿ ನೀರಿಗೆ ಪರದಾಡಬೇಕಾಗುತ್ತದೆ. ಕೆಲವರಿಗೆ ಕಾಂಪೌಂಡ್ ಒಳಗೆ ನೀರಿನ ಸಂಪ್ ಮಾಡಿಕೊಳ್ಳಲು ಜಾಗವೇ ಇಲ್ಲವೆಂದು ಗುತ್ತಿಗೆದಾರನಿಗೆ ಮನವಿ ಮಾಡಿದರೂ ಒಪ್ಪಿಲ್ಲ. ಕಾಂಪೌಂಡ್ ಗೋಡೆಗೆ ಸಮನಾಗಿ ನೀರಿನ ಸಂಪ್‌ಗೆ ಗೋಡೆ ಹಾಕಿಕೊಳ್ಳುವಂತೆ ಹಠ ಹಿಡಿದಿದ್ದು, ಆಗ ಒತ್ತುವರಿ ಮಾಡಿದ ಮನೆಯನ್ನೇ ಬಿಟ್ಟು ಕಾಮಗಾರಿ ಮಾಡಿದ್ದೀರಿ. ಅರ್ಧ ಅಡಿ ಕಾಂಪೌಂಡ್‌ನಿಂದ ಆಚೆ ಇರುವ ನೀರಿನ ತೊಟ್ಟಿ ಏಕೆ ಒಡೆದಿದ್ದೀರಿ ಎಂಬುದಾಗಿ ಪ್ರಶ್ನಿಸಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೂ ದೂರು ನೀಡಿದ್ದೆವು ಎಂದು ಹೇಳಿದ್ದಾರೆ.

ಆಯುಕ್ತೆ ರೇಣುಕಾ ಸ್ಥಳಕ್ಕೆ ಭೇಟಿ ನೀಡಿ, ನೀರಿನ ತೊಟ್ಟಿಗಳನ್ನು ಒಡೆದು ಹಾಕಿದ್ದನ್ನು ಪರಿಶೀಲಿಸಿದರು. ಹಳೇ ಬಡಾವಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಅನುಸರಿಸಿಕೊಂಡು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮಾಡುವುದಾದರೆ ಮಾಡಿ, ಇಲ್ಲದಿದ್ರೆ ಬೇರೆಯವರಿಗೆ ಕಾಮಗಾರಿ ನೀಡಬೇಕಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದರು. ಮನೆ ಮುಂದೆ ಬೆಳೆದಿದ್ದ ಗಿಡ-ಮರಗಳ ಬೇರುಗಳಿಗೆ ಧಕ್ಕೆ ಆಗದಂತೆ ಕಾಮಗಾರಿಗೆ ಸೂಚಿಸಿದ್ದರು. ಇದರಿಂದ ಸಿಟ್ಟಾದ ಗುತ್ತಿಗೆದಾರ ಇತರರು ಆಯುಕ್ತರನ್ನು ಕರೆಸುತ್ತೀರಾ? ನಿಮ್ಮ ರಸ್ತೆ ಕಾಮಗಾರಿಯನ್ನೇ ಮಾಡುವುದಿಲ್ಲವೆಂಬ ಬೆದರಿಕೆಯೊಡ್ಡಿದ್ದರು ಎಂದು ದೂರಿದ್ದಾರೆ.

ಈಗ ನಮಗೆ ಪರಿಚಯವೇ ಇಲ್ಲದವರ ಹೆಸರಿನಲ್ಲಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಕೆಲ ಮನೆಗಳ ನೀರಿನ ಸಂಪ್‌ಗಳನ್ನು ಒಡೆದಿರುವ ಫೋಟೋಗಳನ್ನು ನೀಡಿರುವವರು, ಒತ್ತುವರಿ ಮಾಡಿರುವ ಮನೆಯ ಫೋಟೋವನ್ನು ಮಾಧ್ಯಮಗಳಿಂದ ಮರೆಮಾಚಿದ್ದು ಏಕೆ? ಮುಖ್ಯ ರಸ್ತೆಗಳಲ್ಲಿ ಫೇವರ್ಸ್‌ ಹಾಕುವುದರಿಂದ ವಾಹನ ನಿಲುಗಡೆ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುತ್ತದೆ. ಆದರೆ, ಒಳ ರಸ್ತೆಗಳಲ್ಲಿ ಹಾಕುವ ಅಗತ್ಯವಿರಲಿಲ್ಲ ಎಂದಷ್ಟೇ ಹೇಳಿದ್ದೆವು. ಕಾಮಗಾರಿಗೆ ವಿರೋಧಿಸುವುದಾಗಿದ್ದರೆ ಮನೆ ಮುಂದಿನ ಅಂಗಳವನ್ನೇ ಅಗೆಯಲು ನಾವು ಬಿಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

- - - -25ಕೆಡಿವಿಜಿ6: ಕೆ.ಬಿ. ಬಡಾವಣೆಯಲ್ಲಿ ಫೇವರ್ಸ್ ಅಳವಡಿಸಲು ತೊಟ್ಟಿ ಒಡೆದಿರುವುದು.

-25ಕೆಡಿವಿಜಿ7: ಕೆ.ಬಿ. ಬಡಾವಣೆಯಲ್ಲಿ ಒಂದೂವರೆ ಅಡಿ ಜಾಗ ಒತ್ತುವರಿ ತೆರವು ಮಾಡದಿರುವುದು.