ಟಿ.ಬಿ.ಬಡಾವಣೆಯ ನಿವೇಶನ ಹಂಚಿಕೆ ಮಾಡದಂತೆ ಕೆ.ಸಿ.ಮಂಜುನಾಥ್ ಆಗ್ರಹ

| Published : Sep 04 2025, 01:00 AM IST

ಟಿ.ಬಿ.ಬಡಾವಣೆಯ ನಿವೇಶನ ಹಂಚಿಕೆ ಮಾಡದಂತೆ ಕೆ.ಸಿ.ಮಂಜುನಾಥ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿ ಒಟ್ಟು 17.21 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಭೂಮಿಯನ್ನು ವಸತಿ ರಹಿತರಿಗೆ ಹಂಚಿಕೆ ಮಾಡುವ ಬದಲು ಹಿಂದಿನ ಪುರಸಭೆ ಆಡಳಿತ ಅಧಿಕಾರ ಸಾಹಿಗಳು ತಮಗೆ ಬೇಕಾದ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ನಿವೇಶನಗಳನ್ನು ಮಂಜೂರು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಟಿ.ಬಿ.ಬಡಾವಣೆ ನಿವೇಶನಗಳ ಹಂಚಿಕೆ ಪ್ರಕರಣದ ತನಿಖೆ ಲೋಕಾಯುಕ್ತದಲ್ಲಿ ಬಾಕಿ ಇದ್ದು, ತೀರ್ಪು ಹೊರಬರುವ ತನಕ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡದಂತೆ ಪುರಸಭೆ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪೌರಾಡಳಿತ ಸಚಿವರು, ಪೌರಾಡಳಿತ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗೆ ಪತ್ರ ಬರೆದು ಪ್ರತಿಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ.

ಪಟ್ಟಣದ ಪುರಸಭೆ ವ್ಯಾಪ್ತಿ ಒಟ್ಟು 17.21 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಭೂಮಿಯನ್ನು ವಸತಿ ರಹಿತರಿಗೆ ಹಂಚಿಕೆ ಮಾಡುವ ಬದಲು ಹಿಂದಿನ ಪುರಸಭೆ ಆಡಳಿತ ಅಧಿಕಾರ ಸಾಹಿಗಳು ತಮಗೆ ಬೇಕಾದ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ನಿವೇಶನಗಳನ್ನು ಮಂಜೂರು ಮಾಡಿದ್ದಾರೆ ಎಂದು ದೂರು ನೀಡಿರುವುದಾಗಿ ಹೇಳಿದ್ದಾರೆ.

ತಾವು ಲೋಕಾಯುಕ್ತರಿಗೆ ನೀಡಿದ ದೂರಿನ ಪ್ರಕರಣದ ತನಿಖೆ ನಡೆದು ಅಂತಿಮ ತೀರ್ಪು ಬಾಕಿ ಇದೆ. ತೀರ್ಪು ಪ್ರಕಟಿಸುವವರೆಗೂ ಟಿ.ಬಿ.ಬಡಾವಣೆಯ ಯಾವುದೇ ವ್ಯಕ್ತಿಗಳಿಗೆ, ಸರ್ಕಾರಿ ಅಥವಾ ಸಹಕಾರಿ ಸಂಸ್ಥೆಗಳಿಗೆ ಮತ್ತು ಖಾಸಗಿ ಟ್ರಸ್ಟ್ ಗಳಿಗೆ ನಿವೇಶನ ಹಂಚಿಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ವಿವಾದಿತ ಬಡಾವಣೆ ನಿವೇಶನ ಹಂಚಿಕೆ ಕುರಿತು ಕೌನ್ಸಿಲ್ ಸಭೆಗೂ ವಿಷಯ ಮಂಡಿಸಬಾರದು. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಪ್ರಕರಣ ಲೋಕಾಯುಕ್ತ ತನಿಖೆಯಲ್ಲಿರುವಾಗಲೇ ಕೆಲವೊಂದು ಸರ್ಕಾರಿ ಭವನಗಳಿಗೆ ನಿವೇಶನ ಹಂಚಿಕೆ ಮಾಡಿ ಬಡವರ ಸೂರು ಕಸಿದುಕೊಂಡಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಾಲೂಕಿಗೆ ಭೇಟಿ ನೀಡಿದಾಗ ಹೇಮಾವತಿ ಬಡಾವಣೆ 582 ಅಕ್ರಮ ನಿವೇಶನಗಳ ಸಕ್ರಮ ಮಾಡುವ ಭರವಸೆ ನೀಡಿದ್ದರೂ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ಎಲ್ಲಾ ನಿವೇಶನಗಳನ್ನು ಸಕ್ರಮಗೊಳಿಸಿ ಪುರಸಭೆ ಆದಾಯ ಹೆಚ್ಚಳಕ್ಕೆ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.