ದ.ಕ.ದಲ್ಲಿ ಕಾಫಿ ಬೋರ್ಡ್‌ ಕಚೇರಿ ಸ್ಥಾಪನೆಗೆ ಕೇಂದ್ರ ಸಚಿವರಿಗೆ ಕ್ಯಾ.ಚೌಟ ಮನವಿ

| Published : Feb 06 2025, 11:48 PM IST

ದ.ಕ.ದಲ್ಲಿ ಕಾಫಿ ಬೋರ್ಡ್‌ ಕಚೇರಿ ಸ್ಥಾಪನೆಗೆ ಕೇಂದ್ರ ಸಚಿವರಿಗೆ ಕ್ಯಾ.ಚೌಟ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡದ ಅಡಕೆ ಕೃಷಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡದ ಅಡಕೆ ಕೃಷಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಬಜೆಟ್ ಅಧಿವೇಶದ ಹಿನ್ನೆಲೆ ದೆಹಲಿಯಲ್ಲಿರುವ ಕ್ಯಾ. ಚೌಟ ಅವರು ಗುರುವಾರ ಸಚಿವ ಪೀಯೂಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಹೊರ ದೇಶಗಳಿಂದ ತಪಾಸಣೆಗೆ ಒಳಗಾಗದೆ ಅಡಕೆ ಆಮದು ಆಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸ್ಥಳೀಯ ಅಡಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ ಸಮರ ಎದುರಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಅಡಕೆ ಕೃಷಿಕರು ಸೂಕ್ತ ಬೆಲೆ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ನಿಯಂತ್ರಣವಿಲ್ಲದೆ ಆಮದಾಗುತ್ತಿರುವ ಅಡಕೆ ಉತ್ಪನ್ನಗಳ ಮೇಲೆ ನಿಗಾ ವಹಿಸುವ ಮೂಲಕ ಇಲ್ಲಿನ ಅಡಕೆಗೆ ಸೂಕ್ತ ಮಾರುಕಟ್ಟೆ ದರ ದೊರೆಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಕಾಫಿ ಬೆಳೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತೇಜಿಸುವುದಕ್ಕೆ ಕಾಫಿ ಮಂಡಳಿ ನಡೆಸಿದ ಸಮೀಕ್ಷೆ ವಿವರಗಳ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದನ್ನು ಇದೇ ವೇಳೆ ಸಂಸದರು ಸಚಿವರ ಗಮನಕ್ಕೆ ತಂದರು. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಬೆಳೆ-ಬೆಳೆಗಾರರನ್ನು ಪ್ರೋತ್ಸಾಹಿಸುವುದಕ್ಕೆ ಹಾಗೂ ಈ ಲಾಭದಾಯಕ ಬೆಳೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಕ್ಕೆ ಮಂಗಳೂರಿನಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಲು ಕಾಫಿ ಮಂಡಳಿಗೆ ನಿರ್ದೇಶನ ನೀಡುವಂತೆಯೂ ಸಚಿವ ಪೀಯೂಷ್ ಗೋಯಲ್ ಅವರಿಗೆ ಕ್ಯಾ. ಚೌಟ ಮನವಿ ಮಾಡಿದ್ದಾರೆ.

‘ಬ್ಯಾಕ್ ಟು ಊರು’ ಸಚಿವರ ಬೆಂಬಲ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದಕ್ಕೆ ಪ್ರಾರಂಭಿಸಿರುವ ‘ಬ್ಯಾಕ್ ಟು ಊರು’ ಸೇರಿದಂತೆ ಕ್ಯಾ. ಚೌಟ ಆರಂಭಿಸಿರುವ ವಿನೂತನ ಪರಿಕಲ್ಪನೆಗಳಿಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹ ನೀಡುವುದಾಗಿ ಸಚಿವ ಪೀಯೂಷ್ ಗೋಯಲ್ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.