ಗದಗ: ಕಿಡ್ನಿ ಕಸಿಗಾಗಿ ತಾವು ಎದುರಿಸಿದ ತೊಂದರೆ ಬೇರೆ ಯಾರಿಗೂ ಬರಬಾರದು ಎಂದು ಯೋಚಿಸಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ಕಟ್ಟಿಸಿದ ಹುಲಕೋಟಿಯ ಕೆ.ಎಚ್. ಪಾಟೀಲ ಅವರ ಸಂಕಲ್ಪ ಇತರರಿಗೆ ಮಾದರಿಯಾಗಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ದಿ. ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ, ಮಾತನಾಡಿ, ಬಡವರು ಅಂದರೆ ದುಡ್ಡು ಇಲ್ಲದೇ ಇರೋರಲ್ಲ. ಒಳ್ಳೆಯ ಸಂಕಲ್ಪ ಇಲ್ಲದೇ ಇರುವವರು ಮಾತ್ರ ಬಡವರು. ಅಂದು ಕೆ‌.ಎಚ್. ಪಾಟೀಲ ಅವರು ಉತ್ತಮ ಸಂಕಲ್ಪ ಹೊಂದಿದ್ದರಿಂದಾಗಿ ನಿರ್ಮಾಣಗೊಂಡ ಈ ಆಸ್ಪತ್ರೆಯಿಂದ‌ ಕಡುಬಡವರಿಗೆ ಕಿಡ್ನಿ ಕಸಿಗೆ ಅನುಕೂಲವಾಗಿದೆ. ಮನುಷ್ಯನಿಗೆ ಇಂತಹ ವಿಚಾರ, ಸತ್ ಸಂಕಲ್ಪ ಇರಬೇಕು ಎಂದರು.ಅಪಘಾತ ಸಂಭವಿಸಿ, ನಗರಕ್ಕೆ ತುರ್ತಾಗಿ ಕರೆದೊಯ್ಯಲು ಆಗದ್ದಕ್ಕೆ ತನ್ನ ಪತಿಯನ್ನು ಕಳೆದುಕೊಂಡ ಕಾಯಿಪಲ್ಲೆ ಮಾರುವ ಹೆಣ್ಣುಮಗಳೊಬ್ಬಳು ತಾನು ಕಾಯಿಪಲ್ಲೆ ಮಾರಿದ ಅಲ್ಪ ಹಣ ಕೂಡಿಟ್ಟು ಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸುತ್ತಾಳೆ. ನನ್ನ ನೋವು ಬೇರೆಯವರು ಪಡಬಾರದು ಎಂದು ಆಸ್ಪತ್ರೆ ಕಟ್ಟಿಸಿದ ಅಂತಹ ಮಹಿಳೆಯ ಉತ್ತಮ ಗುಣವನ್ನು ನಾವು ಹೊಂದಬೇಕು. ಊಟ ಮಾಡುವಾಗ ಕಲ್ಲು ಬಂದರೆ ಅದನ್ನು ತೆಗೆದು ಊಟ ಮಾಡುತ್ತೇವೆ. ಅದರಂತೆ ಕನಸು ಕಟ್ಟುವಾಗ ನೂರಾರು ತೊಂದರೆಗಳು ಎದುರಾಗುತ್ತವೆ. ಅದನ್ನು ಎದುರಿಸಿ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು ಎಂದರು.ಆಸ್ಪತ್ರೆಗೆ ಆಗಮಿಸಿದ ವೇಳೆ ಮೊದಲಿಗೆ ಆಸ್ಪತ್ರೆ ಅಂಗಳದಲ್ಲಿ ಸಸಿ ನೆಟ್ಟ ಶ್ರೀಗಳು, ಬಳಿಕ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡ ಪತ್ರಕರ್ತ ಕೊಪ್ಪಳ ಜಿಲ್ಲೆಯ ಹನುಮಂತ ಹಳ್ಳಿಕೇರಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ಕಿಡ್ನಿ ಕಸಿ ಮಾಡಿಕೊಂಡ ಇನ್ನಿತರರ ಯೋಗಕ್ಷೇಮ ವಿಚಾರಿಸಿದರು. ಬಹುವರ್ಷಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇದು ತಮಗೆ ಸಂತಷ ನೀಡಿದೆ ಎಂದರು.ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ. ಅವಿನಾಶ ಓದುಗೌಡ್ರ, ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವೇಮನ ಸಾಹುಕಾರ, ಡಾ. ಪ್ಯಾರ್ ಅಲಿ ನೂರಾನಿ, ಡಾ. ದೀಪಕ, ಕಾನಿಪ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟೇಶ ಇಮರಾಪೂರ, ರಘೋತ್ತಮ ಕೊಪ್ಪರ, ಸುರೇಶ ಕಡ್ಲಿಮಟ್ಟಿ, ಹರೀಶ್ ಎಚ್.ಎಸ್., ಸಂತೋಷ ದೇಶಪಾಂಡೆ, ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಇತರರು ಇದ್ದರು.