ಪ್ರಶಾಂತ್ ಹೆಗಡೆ ಮೂಡಲಮನೆ ಬರೆದ ಐದು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ

ಕನ್ನಡಪ್ರಭ ವಾರ್ತೆ ಹೊನ್ನಾವರ

ಗುರುವನ್ನು ಮೀರಿಸುವ ವಿದ್ಯಾರ್ಥಿ ಸಿಕ್ಕರೆ ಗುರುವಿಗೆ ಇನ್ನೇನು ಬೇಡ. ಕವಿಗಳಿಗೆ ಕಷ್ಟವಿರುತ್ತದೆ, ಬರೆದಿದ್ದನ್ನು ಮೆಚ್ಚಿಕೊಳ್ಳುವವರು ಬೇಕು ಎಂದು ಹಿರಿಯ ಸಾಹಿತಿ ಡಾ. ಶ್ರೀಪಾದ್ ಶೆಟ್ಟಿ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸತ್ವಾಧಾರ ಫೌಂಡೇಶನ್ ವತಿಯಿಂದ ನಡೆದ ಪ್ರಶಾಂತ್ ಹೆಗಡೆ ಮೂಡಲಮನೆ ಅವರು ಬರೆದ ಪಾರಿಜಾತ (ಕವನ ಸಂಕಲನ), ಹುಲಿ ಬೇಟೆ ಕೆಂಚ (ಮಕ್ಕಳ ನಾಟಕ), ಸಪ್ಪೋಡ್ತಿ (ಕಾಡಿನ ಒಡಲ ಕಥೆ), ಮಿಂಚುಳ್ಳಿ (ಹಾಯ್ಕುಗಳು) ಹಾಗೂ ಅಪ್ಪ ಅಂದ್ರೆ ನಂಗಿಷ್ಟ ಈ ಐದು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಒಳ್ಳೆಯ ಗುಣ ಎಲ್ಲರಲ್ಲಿಯೂ ಇರುವುದಿಲ್ಲ. ಅದನ್ನು ಬೆಳೆಸಿಕೊಳ್ಳುವ ಕೆಲಸ ಆಗಬೇಕಿದೆ. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಬದುಕುವವರೆ ಹೆಚ್ಚಾಗಿದ್ದಾರೆ. ಲೋಕಾಂತಕ್ಕೆ ತೆರೆದುಕೊಳ್ಳುವಾಗ ಏಕಾಂತ ಮರೆಯಾಗುತ್ತದೆ ಎಂದು ನುಡಿದರು.


ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಮಾತನಾಡಿ, ಸಾಹಿತಿ ಆದವನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಪುಸ್ತಕದಲ್ಲಿ ಸತ್ವ ಇರಬೇಕು. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನಿಡುವ ನೀಡುವ ಕೃತಿಗಳು ಬರಬೇಕು ಎಂದರು.

ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ, ತೆರಿಗೆ ಸಲಹೆಗಾರ್ತಿ ಸಂಧ್ಯಾ ಹೆಗಡೆ ಕೂಜಳ್ಳಿ, ಶಿಕ್ಷಕಿ ಮಮತಾ ಹೆಗಡೆ, ಉಪನ್ಯಾಸಕ ಚಿದಾನಂದ ಬಂಡಾರಿ ಮಾತನಾಡಿದರು. ಕುಮಟಾದ ಲೆಕ್ಕಪರಿಶೋಧಕ ವಿನಾಯಕ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅದ್ವಿಕಾ ಹೆಗಡೆ ಪ್ರಾರ್ಥಿಸಿದಳು. ಲೇಖಕ ಪ್ರಶಾಂತ್ ಹೆಗಡೆ ಮೂಡಲಮನೆ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ಆಶಯ ನುಡಿಗಳನ್ನಾಡಿದರು. ಸತ್ವಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ್ ಜೋಶಿ ವಂದಿಸಿದರು. ಉಪನ್ಯಾಸಕ ವಿದ್ಯಾಧರ ನಾಯ್ಕ ಕಡತೋಕ ನಿರೂಪಿಸಿದರು.