ಕನ್ನಡಪ್ರಭ ವಾರ್ತೆ ಕಾರವಾರ
ಉತ್ತಮ ಅಂಕ ಪಡೆದವರನ್ನ ಗುರುತಿಸಿ ಗೌರವಿಸಿ ಸನ್ಮಾನಿಸಿದರೆ ಇತರ ವಿದ್ಯಾರ್ಥಿಗಳಿಗೆ ನಾವೂ ಹೆಚ್ಚು ಅಂಕ ಪಡೆದು ಸನ್ಮಾನಿತರಾಗಬೇಕು ಎಂದು ಪ್ರೇರೇಪಣೆ ಉಂಟಾಗುತ್ತದೆ. ಇದರಿಂದ ಉಳಿದವರೂ ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಾರೆ ಎಂದು ಕಾರವಾರ ಅರಣ್ಯ ವಲಯದ ಡಿ.ಎಫ್.ಓ ಅಂಥೋನಿ ಎಸ್. ಮರಿಯಪ್ಪ ಹೇಳಿದರು.ಗರದ ಬಾಡದಲ್ಲಿನ ಶಿವಾಜಿ ಕಾಲೇಜು ಆವರಣದಲ್ಲಿ ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರಸ್ತುತ ಸ್ಪರ್ಧಾತ್ಮಕ ಯುಗ ಆಗಿರುವುದರಿಂದ ಪ್ರತಿಭಾ ಪುರಸ್ಕಾರಕ್ಕೆ ಒಳಗಾದ ವಿದ್ಯಾರ್ಥಿಗಳು ಇದನ್ನ ಸ್ಪೂರ್ತಿಯಾಗಿ ತೆಗದುಕೊಂಡು ಇನ್ನು ಹೆಚ್ಚಿನ ಸಾಧನೆ ಮಾಡಲು ಶ್ರಮ ಪಡಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಅಲ್ಲಾಭಕ್ಷ್, ಸಮಾಜದ ಹಿನ್ನಡೆಗೆ ಮೂಲ ಕಾರಣ ಅಜ್ಞಾನ. ಪೋಷಕರು ಶಿಕ್ಷಣದ ಮಹತ್ವವನ್ನ ಅರಿಯಬೇಕು ಎಂದರು.ಅಧ್ಯಕ್ಷತೆಯನ್ನ ಸಾಮಾಜಿಕ ಅರಣ್ಯ ವಿಭಾಗದ ಡಿ.ಎಫ್.ಓ ಮಂಜುನಾಥ ನಾವಿ ವಹಿಸಿದ್ದರು.
ಕಡಲ ಜೀವಶಾಸ್ತ್ರ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ. ಶಿವಕುಮಾರ್ ಹರಗಿ, ದಿವೇಕರ್ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಬಿ.ಆರ್. ತೋಳೆ, ಬೈಂದೂರು ಪೊಲೀಸ್ ಠಾಣೆ ಪಿಎಸ್ಐ ನವೀನ್ ಬೋರ್ಕರ್, ಕೈಗಾ ಎಸ್ಸಿ-ಎಸ್ಟಿ ನೌಕರರ ಸಂಘ ಶಿವಾನಂದ ರಾಥೋಡ್, ಸಂಘಟನೆಯ ಜಿಲ್ಲಾಧ್ಯಕ್ಷರ ಜಿ.ಡಿ. ಮನೋಜೆ, ಮಹೇಂದ್ರ ಕಾಂಬ್ಲೆ, ಡಾ. ಹೇಮಗಿರಿ, ಹೇಮಂತ ರಾಮಡಗಿ, ಡಾ. ವಿಜಯರಾಜ, ಜಗದೀಶ್ ಒಲೇಕರ್ ಸೇರಿ ಹಲವರು ಉಪಸ್ಥಿತರಿದ್ದರು.ಇಬ್ಬರು ಸಾಧಕರಿಗೆ ಜೀವಮಾನ ಪ್ರಶಸ್ತಿ ಪ್ರದಾನ
ಆಯುಷ್ಮತಿ ರಮಾಬಾಯಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ್ತಿ ಯಮುನಾ ಗಾಂವಕರ್, ಅಂಬೇಡ್ಕರ್ ಜೀವಮಾನ ಸಾಧನೆ ಪ್ರಶಸ್ತಿಯನ್ನ ಆಯುಷ್ಮಾನ್ ಭೀಮಾಶಂಕರ್ ಅಜನಾಳ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತೆ ಯಮುನಾ ಗಾಂವಕರ್, ಭಾರತದಲ್ಲಿ ಜಾತಿ ವಿನಾಶವಾಗಬೇಕು ಎಂದು ಹೋರಾಟ ಮಾಡುತ್ತಿದ್ದೇನೆ. ಸಂಘಟನೆ ನೀಡಿರುವ ಪ್ರಶಸ್ತಿ ನನ್ನ ಹೋರಾಟಕ್ಕೆ ಸಮರ್ಪಿಸಿಕೊಳ್ಳುತ್ತೇನೆ ಎಂದರು.