ಕೆ.ಎಂ.ದೊಡ್ಡಿ: ಶಿವರಾತ್ರಿ ಅಂಗವಾಗಿ ಅದ್ಧೂರಿಯಾಗಿ ನಡೆದ ತೆಪ್ಪೋತ್ಸವ

| Published : Mar 04 2025, 12:36 AM IST

ಸಾರಾಂಶ

ತೆಪ್ಪವನ್ನು ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿದ ನಂತರ ಕಲ್ಯಾಣಿ ಮದ್ಯ ಭಾಗದಲ್ಲಿ ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಗಂಗಾರತಿ ಬೆಳಗಿದರು. ಈವೇಳೆ ಭಕ್ತರ ಹರ್ಷೋಧ್ಗಾರ ಮುಗಿಲು ಮುಟ್ಟಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಹನುಮಂತ ನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಅದ್ಧೂರಿ ತೆಪ್ಪೋತ್ಸವ ಜರುಗಿತು.

ಕಳೆದ ಐದು ದಿನಗಳಿಂದ ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜೆಗಳು ಸಾಂಗವಾಗಿ ಜರುಗಿದ್ದವು. ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯಿಂದ ಪಾವನ ಗಂಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ ವೈಭವದಿಂದ ನೇರವೇರಿತು.

ದೇವಾಲಯದಲ್ಲಿ ಶಿವ-ಪಾರ್ವತಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂತಿಯನ್ನು ಮಂಗಳ ವಾದ್ಯದೊಂದಿಗೆ ಪಾವನ ಗಂಗೆಯ ಕಲ್ಯಾಣಿ ಬಳಿ ತರಲಾಯಿತು.

ಈ ವೇಳೆ ಶ್ರೀಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ತೆಪ್ಪೋತ್ಸವದ ರೂವಾರಿ ಧರ್ಮದರ್ಶಿ ಮಂಡಳಿ ಸದಸ್ಯ ಆಶಯ್ ಮಧು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಕಲ್ಯಾಣಿಯಲ್ಲಿ ತೆಪ್ಪೋತ್ಸವದ ಅಂಗವಾಗಿ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತೆಪ್ಪದ ಅಲಂಕಾರ ಭಕ್ತರ ಗಮನ ಸೆಳೆಯಿತು.

ತೆಪ್ಪವನ್ನು ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿದ ನಂತರ ಕಲ್ಯಾಣಿ ಮದ್ಯ ಭಾಗದಲ್ಲಿ ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಗಂಗಾರತಿ ಬೆಳಗಿದರು. ಈವೇಳೆ ಭಕ್ತರ ಹರ್ಷೋಧ್ಗಾರ ಮುಗಿಲು ಮುಟ್ಟಿತು. ಬಳಿಕ ದೇವಾಲಯ ಪ್ರಾಂಗಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಭರತನಾಟ್ಯ ಭಕ್ತರ ಗಮನ ಸೆಳೆಯಿತು.

ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಕಳೆದ ಮೂವತೆರಡ್ತು ವರ್ಷಗಳ ಹಿಂದೆ ತಂದೆ ದಿ.ಜಿ.ಮಾದೇಗೌಡರು ಹನುಮಂತನಗರವನ್ನು ಒಂದು ಆಧ್ಯಾತ್ಮಿಕ ಕ್ಷೇತ್ರವಾಗಿ ನಿರ್ಮಿಸಿದ್ದಾರೆ. ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಮುಂದಿನ ವರ್ಷ ಇನ್ನು ಅದ್ದೂರಿಯಾಗಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಭಾರತೀ ಎಜುಕೇಷನ್ ಟ್ರಸ್ಟ್ ಸಿಇಒ ಆಶಯ್ ಮಧು ಮಾತನಾಡಿ, ಕಲ್ಯಾಣಿಯಲ್ಲಿ ತೆಪ್ಪೋತ್ಸವ ಆಯೋಜಿಸಿ ಮತ್ತೊಂದು ದೇವತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ವರ್ಷ ಇನ್ನಷ್ಟು ವೈಭವದಿಂದ ತೆಪ್ಪೋತ್ಸವ ಜರುಗಲಿದೆ ಎಂದರು.

ಈ ವೇಳೆ ಬಿಂದು ಮಧು ಮಾದೇಗೌಡ, ಬೃಂದಾ ಆಶಯ್, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಜ್‌ಮಣಿ, ಪ್ರೊ.ಎಸ್.ನಾಗರಾಜು, ಪ್ರಾಂಶುಪಾಲರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಡಾ.ಬಾಲಸುಬ್ರಮಣ್ಯಂ, ಡಾ.ಚಂದನ್, ಡಾ.ಎಸ್.ಎಲ್. ಸುರೇಶ್, ಸಿ.ವಿ.ಮಲ್ಲಿಕಾರ್ಜುನ, ಮುಖಂಡರಾದ ಆರ್. ಸಿದ್ದಪ್ಪ, ಬಿ.ಗಿರೀಶ್ ಸೇರಿದಂತೆ ಹಲವರಿದ್ದರು.