ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಿರುಗಾವಲು ವಿವಿದ್ದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಪಿ.ನರೇಂದ್ರ ಅವಿರೋಧವಾಗಿ ಮೂರನೇ ಭಾರಿ ಪುನರಾಯ್ಕೆಗೊಂಡರು.ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಪಿ.ನರೆಂದ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಜಿ.ದೊಡ್ಡಿ ಚಿಕ್ಕಯ್ಯ ನಾಮಪತ್ರ ಸಲ್ಲಿಕೆ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವಿರೋಧ ಆಯ್ಕೆ ಬಗ್ಗೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಕೆ.ಪಿ.ನರೇಂದ್ರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಂಘದಲ್ಲಿ ಸಾರ್ವಜನಿಕರು 9 ಕೋಟಿ ರು. ನಿಶ್ಚಿತ ಠೇವಣಿ ಇಟ್ಟಿದ್ದಾರೆ. ಇದರಿಂದ ಸಂಘವನ್ನು ಅಭಿವೃದ್ಧಿಗೊಳಿಸಲಾಗಿದೆ. ವರ್ಷಕ್ಕೆ ಸುಮಾರು 60 ಕೋಟಿ ವಾಹಿವಾಟು ನಡೆಸುತ್ತಾ ರೈತರು ಹಾಗೂ ಸಾರ್ವಜನಿಕರ ಹಿತ ಕಾಯುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 100 ಕೋಟಿ ರು. ವಹಿವಾಟು ನಡೆಸಲು ಅಂದಾಜಿಸಲಾಗಿದೆ ಎಂದರು.ಸಹಕಾರ ಸಂಘದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ವ್ಯಾಪಾರ, ಒಡವೆ, ವೈಯಕ್ತಿಕ, ಬೆಳೆ ಸಾಲವನ್ನು ವಿತರಿಸಲಾಗುತ್ತಿದೆ. ಎರಡು ಸಾವಿರ ಮಂದಿಗೆ ಪಡಿತರ ವಿತರಣೆ, ಬ್ಯಾಂಕಿಂಗ್, ರಾಸಾಯನಿಕ ಗೊಬ್ಬರ ಮಾರಾಟ, ಸೂಪರ್ ಮಾರ್ಕೇಟ್, ರಿಯಾಯ್ತಿ ದರದಲ್ಲಿ ಅಂತಿಮ ಶವಯಾತ್ರೆ ವಾಹನ ನೀಡುವಿಕೆ ಸೇರಿದಂತೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದಂತೆ ನಿರ್ದೇಶಕರ ಹಾಗೂ ಷೇರುದಾರರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ನೀಡುವ ಜೊತೆಗೆ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಇದೇ ವೇಳೆ ನಿರ್ದೇಶಕರಾದ ಅಜೀಜ್‌ಖಾನ್, ಕೆ.ಎಂ ಜಗದೀಶ್,ಎಂ.ಎಸ್ ನಿಂಗೇಗೌಡ, ಕೆ.ಎಸ್ ಮನೋಹರ್, ಯಶೋಧ, ಜಯಶೀಲಾ, ಆನಂದ್, ಸಿದ್ದರಾಜು, ಮಾಲಾಶ್ರೀ, ಅಲ್ಪಾಫ್ ಮೆಹದಿ, ಸಂಘದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಿವಲಿಂಗು ಸೇರಿದಂತೆ ಮುಖಂಡರು ಇದ್ದರು.