ಸಾರಾಂಶ
ಮಧ್ಯಾಹ್ನ 12.45 ರಿಂದ 1 ಗಂಟೆಯೊಳಗೆ ಗೋಡೆ ಕುಸಿಯಿತು. ಏಕಾಏಕಿ ಗೋಡೆ ಕುಸಿದು ಬಿತ್ತು.
- ನಾಲ್ವರು ವ್ಯಾಪಾರಿಗಳಿಗೆ ಗಾಯ
---ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೃದಯ ಭಾಗದಲ್ಲಿರುವ ಒಲಂಪಿಯಾ ಚಿತ್ರಮಂದಿರ ಹಿಂಭಾಗದ ಗೋಡೆ ಕುಸಿದು ಬಿದ್ದು ನಾಲ್ವರು ರಸ್ತೆಬದಿ ವ್ಯಾಪಾರಿಗಳು ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ವ್ಯಾಪಾರಿಗಳಾದ ಸತೀಶ್, ತಬ್ರೇಜ್, ಹರ್ಮನ್ ಮತ್ತು ಶಾಕೀಬ್ ಎಂಬವರು ಗಾಯಗೊಂಡಿದ್ದು, ನಾಲ್ವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಒಲಂಪಿಯಾ ಚಿತ್ರಮಂದಿರವು ಮಣ್ಣಿನ ಕಟ್ಟಡವಾಗಿದ್ದು, ಶಿಥಿಲಾವಸ್ಥೆ ತಲುಪಿತ್ತು. ಇಲ್ಲಿ ಸಿನಿಮಾ ಪ್ರದರ್ಶನ ಸಹ ಸ್ಥಗಿತಗೊಂಡಿದ್ದು, ಬಟ್ಟೆ ವ್ಯಾಪಾರಕ್ಕೆ ಮಳಿಗೆ ನೀಡಲು ಕಾಮಗಾರಿ ಪ್ರಗತಿಯಲ್ಲಿತ್ತು. ಈ ಚಿತ್ರಮಂದಿರ ಸುತ್ತಮುತ್ತ ರಸ್ತೆಬದಿಯಲ್ಲಿ ಕೆಲವರು ಬಟ್ಟೆ ಸೇರಿದಂತೆ ಇನ್ನಿತರೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.ನಮ್ಮ ಮೇಲೆ ಬಿದ್ದ ಗೋಡೆ
ಗಾಯಗೊಂಡ ವ್ಯಾಪಾರಿ ಸತೀಶ್ ಮಾತನಾಡಿ, ಮಧ್ಯಾಹ್ನ 12.45 ರಿಂದ 1 ಗಂಟೆಯೊಳಗೆ ಗೋಡೆ ಕುಸಿಯಿತು. ಏಕಾಏಕಿ ಗೋಡೆ ಕುಸಿದು ನಮ್ಮ ಮೇಲೆ ಬಿತ್ತು. ಇಬ್ಬರು ಹುಡುಗರು ಮಣ್ಣಿನಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ವೇಳೆ ಮತ್ತೊಬ್ಬ ಯುವಕ ಗಾಯಗೊಂಡಿದ್ದಾಗಿ ಹೇಳಿದರು.ವಲಯ ಕಚೇರಿ 6ರ ಉಪ ಆಯುಕ್ತೆ ಪ್ರತಿಭಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಸಿಬ್ಬಂದಿ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಿದರು. ಕಟ್ಟಡಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಲಾಗಿದ್ದು, ಮಾಲೀಕರು ಊರಲ್ಲಿ ಇಲ್ಲ ಎಂದು ವಲಯ ಆಯುಕ್ತೆ ಪ್ರತಿಭಾ ತಿಳಿಸಿದರು.
ಗೋಡೆ ಕುಸಿದ ವಿಚಾರ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿದರು. ಒಲಿಂಪಿಯಾ ಟಾಕೀಸ್ಒಂದೂವರಣೆಯ ಗಲ್ಲಿಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿತ್ತು.ಕಾಮಗಾರಿಗೆ ತಡೆ
ಒಲಂಪಿಯಾ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನ ಸ್ಥಗಿತಗೊಂಡ ಬಳಿಕ ಥಿಯೇಟರ್ಅನ್ನು ವ್ಯಾಪಾರ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಯಾವುದೇ ಸುರಕ್ಷತೆ ಇಲ್ಲದೇ ಕಾಮಗಾರಿ ಆರಂಭಿಸಿದ್ದರಿಂದ ಕಾಮಗಾರಿ ನಿಲ್ಲಿಸುವಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ.