ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಳೆದ 4 ತಿಂಗಳ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಪಟ್ಟಣದ ಪುರಸಭೆ ಪೌರ ಕಾರ್ಮಿಕರು ಮುಖ್ಯಾಧಿಕಾರಿಗೆ ಮನವಿ ಮಾಡಿದರು.ನಾಲ್ಕು ತಿಂಗಳಿಂದ ವೇತನ ಪಾವತಿಸದ ಹಿನ್ನೆಲೆಯಲ್ಲಿ ಸಂಸಾರದ ನಿರ್ವಹಣೆ ಕಷ್ಟವಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಸಹಸ್ರಾರು ರು.ಗಳನ್ನು ಬಡ್ಡಿಗಾಗಿ ಸಾಲ ಮಾಡುತ್ತಿದ್ದೇವೆ. ನಮ್ಮನ್ನು ಈ ರೀತಿ ಶೋಷಣೆ ಮಾಡುತ್ತಿದ್ದೀರಿ ಎಂದು ಪೌರ ಕಾರ್ಮಿಕರು ಪ್ರಶ್ನೆ ಮಾಡಿದರು.
ಬೆಳಗ್ಗೆ ಬೇಗ ಎದ್ದು ಪಟ್ಟಣವನ್ನು ಸ್ಚಚ್ಛ ಮಾಡುತ್ತೇವೆ. ನಮಗೆ ಅಧಿಕಾರಿಗಳು ಸಾರ್ವಜನಿಕರು ಫೋನ್ ಮಾಡಿ ಸ್ವಚ್ಚಮಾಡಿ ಎಂದು ಬೆನ್ನು ಬೀಳುತ್ತಾರೆ. ಜನರಿಗೆ ಸರಿಯಾದ ಸಮಯಕ್ಕೆ ಕುಡಿಯುವ ನೀರನ್ನು ಬಿಡಬೇಕು. ಇಷ್ಟೆಲ್ಲಾ ಜವಾಬ್ದಾರಿ ಹೊತ್ತು ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವ ನಮಗೆ ಕಾಲ ಕಾಲಕ್ಕೆ ವೇತನ ಕೊಡದೆ ಸತಾಯಿಸುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮಗೂ ಸಂಸಾರವಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ನಮ್ಮ ಅಹವಾಲುಗಳನ್ನು ಅಲಿಸಿ ಕೂಡಲೇ ವೇತನ ಪಾವಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ಮಾಜಿ ಸದಸ್ಯ ಎಚ್.ಆರ್.ಲೋಕೇಶ್ ಮಾತನಾಡಿ, ಮೊದಲು ಪೌರಕಾರ್ಮಿಕರಿಗೆ ವೇತನ ನೀಡಿ ಎಂದು ಅಧಿಕಾರಿಗಳಿಗೆ ಹೇಳಿ ಸಾಕಾಗಿದೆ. ಆಡಳಿತ ಮಂಡಳಿಯಿದ್ದಾಗ ಜವಾಬ್ದಾರಿಯನ್ನು ಸದಸ್ಯರ ಮೇಲೆ ಹೇರುವ ಸಾರ್ವಜನಿಕರು ಅಧಿಕಾರಿಗಳನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದರು.
ಒಬ್ಬ ಸರ್ಕಾರಿ ನೌಕರ ಒಂದು ದಿನ ತನ್ನ ವೇತನವು ಬಿಡುಗಡೆಯಾಗದಿದ್ದರೆ ಸುಮ್ಮನಿರುತ್ತಾರಾ?, ಪೌರ ಕಾರ್ಮಿಕರು ನಮ್ಮಂತೆ ಬದುಕು ಸಾಗಿಸಬೇಕಲ್ಲಾ. ಕೆಳ ಹಂತದಿಂದ ಮುಖ್ಯಾಧಿಕಾರಿಯವರೆವಿಗೂ ಬಡ್ತಿ ಪಡೆದು ಎಲ್ಲರ ಕಷ್ಟವನ್ನು ಅರಿತಿರುವ ಮುಖ್ಯಾಧಿಕಾರಿ ಅಶೋಕ್ ವಿಳಂಬ ಮಾಡದೆ ವೇತನ ಪಾವತಿಸಬೇಕು ಎಂದು ಮನವಿ ಮಾಡಿದರು.
ಪೌರ ಕಾರ್ಮಿಕರ ಅಹವಾಲು ಆಲಿಸಿದ ಮುಖ್ಯಾಧಿಕಾರಿ ಅಶೋಕ್, ನಾನು ಮುಖ್ಯಾಧಿಕಾರಿಯಾದ ನಂತರ ಹಳೆ ಬಾಕಿಯನ್ನೆಲ್ಲಾ ಪೌರ ಕಾರ್ಮಿಕರಿಗೆ ಬಿಡುಗಡೆ ಮಾಡಿದ್ದೇನೆ. ಈಗ ಪಟ್ಟಣದ ಬಹುತೇಕರು ವಾಣಿಜ್ಯ ಹಾಗೂ ಮನೆ ಕಂದಾಯ ಪಾವತಿಸಿಲ್ಲ. ಜೊತೆಗೆ ಸರ್ಕಾರಿ ಕಚೇರಿಗಳು ಕೂಡಾ ಕಂದಾಯ ಪಾವತಿಸುತ್ತಿಲ್ಲ. ಹೀಗಾಗಿ ವೇತನಕ್ಕೆ ತೊಂದರೆಯಾಗಿದೆ ಎಂದರು.ಮುಂದಿನ ದಿನಗಳಲ್ಲಿ ಕಂದಾಯ ಬಾಕಿಯಿರುವ ಸ್ಥಳಗಳಲ್ಲಿ ಟೆಂಟ್ ಹಾಕಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಹೆಚ್ಚು ಕಂದಾಯ ಉಳಿಸಿಕೊಂಡಿರುವವರ ವಾಣಿಜ್ಯ ಮಳಿಗೆಗಳು ಹಾಗೂ ಕಚೇರಿಗಳ ಮುಂದೆ ಕಸವನ್ನು ಸುರಿಯುವ ಮೂಲಕ ಪ್ರತಿಭಟಿಸಲಾಗುವುದು ಎಂದರು.
ಶತಾಯಗತಾಯ ಕಂದಾಯವನ್ನು ವಸೂಲಿ ಮಾಡಿ ಪೌರ ಕಾರ್ಮಿಕರ ವೇತನವನ್ನು ಸಂದಾಯ ಮಾಡುತ್ತೇವೆ. ಸದ್ಯ 2 ತಿಂಗಳ ವೇತನವನ್ನು ಇನ್ನೊಂದು ವಾರದೊಳಗೆ ಬಿಡುಗಡೆ ಮಾಡಲಾಗುವುದು. ಪೌರ ಕಾರ್ಮಿಕರ ಎಲ್ಲಾ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಪುರಸಭೆ ಆರೋಗ್ಯಾಧಿಕಾರಿ ಅಶೋಕ್, ಪರಿಸರ ಎಂಜಿನಿಯರ್ ಪ್ರಿಯಾಂಕ, ಮಾಜಿ ಸದಸ್ಯರಾದ ಡಿ.ಪ್ರೇಮಕುಮಾರ್, ತಿಮ್ಮೇಗೌಡ, ಸಾಮಾಜಿಕ ಹೋರಾಟಗಾರ ಮಿಲಿಟರಿ ಸುಕುಮಾರ್ ಸೇರಿದಂತೆ ಹಲವರಿದ್ದರು.