ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನೇರವಾಗಿ ಜನರ ಬಳಿಗೆ ಬಂದಿರುವುದು ಅತ್ಯಂತ ಸಂತೋಷದ ವಿಷಯ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮ ನಾಡಿನ ಕಲೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು.
ಕೆ.ಆರ್.ಪೇಟೆ:
ತಾಲೂಕಿನ ಕಲ್ಲಹಳ್ಳಿ ಬಳಿಯ ಭೂವರನಾಥ ಸ್ವಾಮಿ ದೇಗುಲದ ಬಳಿ ಕಲಾ ನಡಿಗೆ ನಿಮ್ಮ ಬಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ತಬಲಾ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನೇರವಾಗಿ ಜನರ ಬಳಿಗೆ ಬಂದಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮ ನಾಡಿನ ಕಲೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಮಾತನಾಡಿ, ಕಲಾ ಪ್ರಕಾರಗಳನ್ನು ಗ್ರಾಮೀಣ ಜನತೆಗೆ ತಲುಪಿಸುವ ಸದುದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಸಂಭ್ರಮದಲ್ಲಿ ಎನ್.ಪರಮೇಶ್ ಮತ್ತು ತಂಡದವರಿಂದ ಮಧುರವಾದ ಸುಗಮ ಸಂಗೀತ, ನಾದಸ್ವರ ಕಾರ್ಯಕ್ರಮ ಹೆಬ್ಬಾಳು ಖ್ಯಾತಿಯ ನಾರಾಯಣ ತಂಡದಿಂದ ನಡೆದು ಪ್ರತಿಯೊಬ್ಬರ ಮನಸೂರೆಗೊಂಡಿತು.ಸಮಾರಂಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.ಬಂದಮ್ಮ ದೇವಿಗೆ ತಂಬಿಟ್ಟಿನ ಆರತಿ ಸಮರ್ಪಣೆ
ಕಿಕ್ಕೇರಿ:ಕೋಟೆ ಆಂಜನೇಯ ಗಣಪತಿ ದೇಗುಲ ಬಳಿಯ ಬಂದಮ್ಮನ ಹಬ್ಬಕ್ಕೆ ವಿಜೃಂಭಣೆಯಿಂದ ರೈತಾಪಿ ಸಮೂಹ ಚಾಲನೆ ನೀಡಿತು.ಕೋಟೆ ಗಣಪತಿ, ಆಂಜನೇಯ, ಉಪ್ಪರಿಗೆ ಬಸವೇಶ್ವರನಿಗೆ ಪೂಜೆ ಸಲ್ಲಿಸಿ ಹಬ್ಬದ ಮೆರವಣಿಗೆ ಆರಂಭವಾಯಿತು. ಮಹಿಳೆಯರು ಶ್ರದ್ಧಾಭಕ್ತಿಯಿಂದ ದೇಗುಲದ ಬಳಿ ಆಗಮಿಸಿದರು. ಹೂವಿನ ಮಡೆಯ ತಂಬಟ್ಟಿನ ರಾಗಿದೀವಿಗೆ ಆರತಿ ತಯಾರಿಸಿಕೊಂಡು ಬಂದಿದ್ದರು.ತಲೆ ಮೇಲೆ ತಂಬಿಟ್ಟು ಹೊತ್ತುಕೊಂಡು ಗ್ರಾಮ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಸರತಿ ಸಾಲಿನಲ್ಲಿ ಸಾಗಿದರು. ಮೆರವಣಿಗೆ ಮುಂದೆ ತಮಟೆ ವಾದ್ಯ, ಪಂಜಿನ ಆರತಿ ಸಾಗಿತು. ಗ್ರಾಮದ ಹೊರವಲಯದಲ್ಲಿ ಬಂದಮ್ಮ ದೇವಿ ಗದ್ದುಗೆ ತಯಾರಿಸಲಾಯಿತು. ಗುಮಚಿಕಲ್ಲಿನ ದೇವಿ ಗದ್ದುಗೆಗೆ ಅರಿಶಿನ, ಕುಂಕುಮ, ಪುಷ್ಪಗಳಿಂದ ಅಲಂಕರಿಸಲಾಯಿತು. ಧೂಪ ದೀಪದ ಆರತಿ ಬೆಳಗಲಾಯಿತು. ಹಣ್ಣು ಕಾಯಿ ಇಟ್ಟು, ತಂಬಿಟ್ಟು, ಚಿಗಣಿ ನೈವೇದ್ಯ ಅರ್ಪಿಸಲಾಯಿತು. ಭಕ್ತಾದಿಗಳಿಗೆ ಚಿಗಣಿ ಪ್ರಸಾದ ವಿತರಿಸಲಾಯಿತು.
ಇದಕ್ಕೂ ಮುನ್ನ ಅರಳಿಕಟ್ಟೆ ಬಳಿಯ ಬಂದಮ್ಮ ಗುಡಿಗೆ ಗ್ರಾಮದ ಹಿರಿಯರು ತೆರಳಿ ಮಾಂಸದ ಅಡುಗೆ ನೈವೇದ್ಯ ಅರ್ಪಿಸಲಾಯಿತು. ಮಳೆ, ಬೆಳೆ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥಿಸಲಾಯಿತು.