ಕೆ.ಆರ್.ಪೇಟೆ ತಾಲೂಕಿನಿಂದ ಚುನಾಯಿತ ಮನ್ಮುಲ್ ನಿರ್ದೇಶಕ ಡಾಲು ರವಿ ಡೇರಿಯಲ್ಲಿ ರಾಜಕೀಯ ಮಾಡಿ ಜೆಡಿಎಸ್ ಪಕ್ಷದ ಪರ ಆಡಳಿತ ಇರುವ ಸಹಕಾರ ಸಂಘಗಳ ಕಾರ್ಯದರ್ಶಿ ಮತ್ತು ಹಾಲು ಪರೀಕ್ಷತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ರೈತರಿಗೆ ನೀಡಬೇಕಾದ ಸವಲತ್ತುಗಳ ಪೂರೈಕೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಾಲು ಪೂರೈಕೆ ಮಾಡುವ ಸಹಕಾರ ಸಂಘಗಳಿಗೆ ಅನಗತ್ಯ ಕಿರುಕುಳ, ತೊಂದರೆ, ರೈತರಿಗೆ ಅನ್ಯಾಯ, ವಂಚನೆ ಖಂಡಿಸಿ ಪಟ್ಟಣದ ಹೊರವಲಯದ ಮನ್ಮುಲ್ ಹಾಲು ಶಿಥಲೀಕರಣ ಘಟಕ ಉಪ ಕೇಂದ್ರದ ಎದುರು ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಯಿತು.

ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ನೇತೃತ್ವದಲ್ಲಿ ಮನ್ಮುಲ್ ಉಪ ಕೇಂದ್ರಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಕೇಂದ್ರದ ಒಳಗೆ ಬಿಡದೆ ಬಾಗಿಲಿನಲ್ಲಿಯೇ ತಡೆದು ನಿಲ್ಲಿಸಿದರು. ಇದರಿಂದ ಆಕ್ರೋಶಗೊಂಡರು.

ನಂತರ ಜೆಡಿಎಸ್ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿಯೇ ಶಾಮೀಯಾನ ಹಾಕಿ ಪ್ರತಿಭಟನೆಗೆ ಮುಂದಾದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಪರಿಸ್ಥಿತಿ ಅರಿತ ಪೊಲೀಸರು ನಂತರ ಶಿಥಲೀಕರಣದ ಘಟಕದ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿದರು.

ಪಟ್ಟಣದ ಮನ್ಮುಲ್ ಹಾಲು ಶಿಥಲೀಕರಣ ಘಟಕದ ಉಪ ಕೇಂದ್ರಕ್ಕೆ ಹಾಲು ಪೂರೈಕೆ ಮಾಡುವ ಸಹಕಾರ ಸಂಘಗಳಿಗೆ ಅನಗತ್ಯ ತೊಂದರೆ, ಡೇರಿ ಕಾರ್ಯದರ್ಶಿಗಳು ಮತ್ತು ಹಾಲು ಪರೀಕ್ಷಕರಿಗೆ ಅನಗತ್ಯ ಕಿರುಕುಳ ಹೆಚ್ಚಳವಾಗುತ್ತಿ ಎಂದು ಆರೋಪಿಸಿದರು.

ಎಸ್‌ಎನ್‌ಎಫ್ ಹೆಸರಿನಲ್ಲಿ ಪೂರೈಕೆ ಮಾಡಿದ ಶುದ್ಧ ಹಾಲಿಗೂ ಕಳಪೆ ಹಣೆಪಟ್ಟಿ ಹಚ್ಚಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಪಕ್ಷಪಾತ ನೀತಿ ಮೂಲಕ ರೈತರಿಗೆ ವಂಚನೆ ಮಾಡಿರುವ ಸೂಪರ್ ವೈಸರ್ ಗಳನ್ನು ತಕ್ಷಣವೇ ಅಮಾನತು ಮಾಡಿ ವಿಚಾರಣೆಗೆ ಒಳಪಡಿಸುವಂತೆ ಆಗ್ರಹಿಸಿದರು.

ತಾಲೂಕಿನಿಂದ ಚುನಾಯಿತ ಮನ್ಮುಲ್ ನಿರ್ದೇಶಕ ಡಾಲು ರವಿ ಡೇರಿಯಲ್ಲಿ ರಾಜಕೀಯ ಮಾಡಿ ಜೆಡಿಎಸ್ ಪಕ್ಷದ ಪರ ಆಡಳಿತ ಇರುವ ಸಹಕಾರ ಸಂಘಗಳ ಕಾರ್ಯದರ್ಶಿ ಮತ್ತು ಹಾಲು ಪರೀಕ್ಷತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ರೈತರಿಗೆ ನೀಡಬೇಕಾದ ಸವಲತ್ತುಗಳ ಪೂರೈಕೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಿಲೀಂಗ್ ಸೆಂಟರ್‌ನಲ್ಲಿ ಫೇಲ್ ಆದ ಅದೇ ಹಾಲನ್ನು ಎಸ್‌ಎನ್‌ಎಫ್ ಹೆಚ್ಚಾಗಿದೆ ಎಂದು ತೋರಿಸಿಕೊಂಡು ಗೆಜ್ಜಲಗೆರೆಯ ಮನ್ಮುಲ್ ಕೇಂದ್ರಕ್ಕೆ ಪೂರೈಕೆ ಮಾಡಿ ತಾವು ಹಣ ಲಪಟಾಯಿಸುತ್ತಿದ್ದಾರೆ. ಈ ದಂಧೆಯಲ್ಲಿ ತಾಲೂಕಿನ ಹಾಲು ಉತ್ಪಾದಕರಿಗೆ ಕನಿಷ್ಠ 3 ಕೋಟಿಗೂ ಅಧಿಕ ಹಣ ನಷ್ಠವಾಗಿದೆ ಎಂದು ಆರೋಪಿಸಿದರು.

ಕೆಲವು ಡೈರಿಗಳು ರೈರಿಗೆ ಹಾಲಿನ ತೂಕದಲ್ಲಿಯೂ ವಂಚನೆ ಮಾಡುತ್ತಿರುವುದು ಬಹಿರಂಗಗೊಂಡಿದೆ. ಮನ್ಮುಲ್ ಹಾಲಿನಪುಡಿ ಹಗರಣ ಈಗಾಗಲೇ ಬೆಳಕಿಗೆ ಬಂದಿದೆ. ಡೈರಿಗಳಿಗೆ ನಿರ್ದೇಶಕನ ಹಸ್ತಕ್ಷೇಪ ಮತ್ತು ದಬ್ಬಾಳಿಕೆ ನಿಲ್ಲಬೇಕು. ರೈತರಿಗೆ ವಂಚನೆ ಮಾಡುತ್ತಿರುವ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಟಿ.ಮಂಜು, ಪಕ್ಷದ ಕಾರ್ಯಕರ್ತರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿ, ನಿರ್ದೇಶಕರ ಒತ್ತಡಕ್ಕೆ ಮಣಿದು ಮನ್ಮುಲ್ ಅಧಿಕಾರಿಗಳು ತಾಲೂಕಿನ ವಿವಿಧ ಡೈರಿಗಳ ಮೇಲೆ ತೋರಿಸುತ್ತಿರುವ ತಾತರಮ್ಯ ನೀತಿ ಮತ್ತು ದಬ್ಬಾಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಸಹಕಾರ ಸಂಘಗಳಲ್ಲಿ ರಾಜಕೀಯ ಸಲ್ಲದು. ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡುತ್ತಿರುವ ನೌಕರರ ಅಗತ್ಯತೆ ನಮಗಿಲ್ಲ. ದಬ್ಬಾಳಿಕೆ ನಡೆಸುತ್ತಿರುವ ಡೈರಿ ಸೂಪರ್ ವೈಸರ್ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಸ್ಥಳದಲ್ಲಿದ್ದ ಮನ್ಮುಲ್ ಎಂಡಿ. ರಘು ಅವರನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಎಚ್.ಟಿ.ಲೋಕೇಶ್, ಶೀಳನೆರೆ ಎಸ್.ಎಲ್.ಮೋಹನ್, ದಿಶಾ ಸಮಿತಿ ಸದಸ್ಯ ನರಸನಾಯಕ್, ಹುಲ್ಲೇಗೌಡ, ಅಕ್ಕಿಹೆಬ್ಬಾಳು ರಘು, ಕಿಕ್ಕೇರಿ ಮಧು, ಕೃಷ್ಣೇಗೌಡ, ಟಿ.ಬಲದೇವ್, ಮೆಣಸ ಮಹದೇವೇಗೌಡ, ಕೊರಟೀಕೆರೆ ದಿನೇಶ್, ಐನೋರಹಳ್ಳಿ ಮಲ್ಲೇಶ್, ವಕೀಲ ಧನಂಜಯ, ದಿಲೀಪ್ ಕುಮಾರ, ರವಿಕುಮಾರ್, ರಾಜೇನಹಳ್ಳಿ ಕುಮಾರಸ್ವಾಮಿ, ಅರಳಕುಪ್ಪೆ ಪ್ರತಾಪ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಹಲವರು ಇದ್ದರು.