ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ವಿವಿಧೆಡೆ ಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಬುಧವಾರ ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ದೇವರಿಗೆ ಜೇನುತುಪ್ಪ, ಎಳೆನೀರು, ಗಂಗಾಜಲ ಮತ್ತು ಬಿಲ್ವ ಪತ್ರೆಯನ್ನು, ಬಿಲ್ವ ಹಣ್ಣು, ದಾತುರ ಅರ್ಪಿಸಿ ಶಿವನನ್ನು ಪೂಜಿಸಿಲಾಯಿತು. ಭಕ್ತಾದಿಗಳು ಬೆಳಗ್ಗೆಯಿಂದ ಸಂಜೆವರೆವಿಗೂ ಸರತಿ ಸಾಲಿನಲ್ಲಿ ನಿಂತು ಹೂ, ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.
ಅನೇಕ ದೇವಾಲಯಗಳಲ್ಲಿ ಹಾಲು, ಮೊಸರು, ಜೇನು, ತುಪ್ಪ, ಸಕ್ಕರೆ, ಗಂಗಾಜಲ ಸೇರಿದಂತೆ ವಿವಿಧ ಅಭಿಷೇಕಗಳನ್ನು ಅರ್ಚನೆಗಳನ್ನು ಭಕ್ತರ ಇಷ್ಟಾರ್ಥ ಸಿದ್ದಿಗೆ ದೇವರಲ್ಲಿ ಪ್ರಾರ್ಥಿನೆ ಸಲ್ಲಿಸಲಾಯಿತು.ಹಲವು ದೇವಾಲಯಗಳಲ್ಲಿ ಭಕ್ತರಿಗೆ ಹಣ್ಣು ಮತ್ತ ಹಣ್ಣಿನ ರಸವನ್ನು ಪ್ರಸಾದದ ರೂಪವಾಗಿ ನೀಡಲಾಯಿತು. ಶಿವಲಿಂಗವನ್ನು ಬಿಲ್ವಪತ್ರೆಗಳಿಂದ ಅಲಕಂರಿಸಲಾಗಿತ್ತು. ಚಂದನ ಮತ್ತು ವಿಭೂತಿ ಭಸ್ಮವನ್ನು ಅರ್ಪಿಸಿ ಅದನ್ನು ಭಕ್ತರಿಗೆ ಹಣೆಗೆ ಹಚ್ಚಿಕೊಳ್ಳಲು ನೀಡಲಾಯಿತು. ದೇವಾಲಯಕ್ಕೆ ತೆರಳಿದ ಭಕ್ತರು ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಶಿವನನ್ನು ಜಪಿಸುತ್ತಾ ಪೂಜೆ ಸಲ್ಲಿಸಿ ತಮ್ಮ ಭಕ್ತಿ-ಭಾವ ಪ್ರದರ್ಶನ ಮಾಡಿದರು.
ತಾಲೂಕಿನ ಹರಿಹರಪುರದ ಹರಿಹರೇಶ್ವರ, ಅಘಲಯದ ಮಲ್ಲೇಶ್ವರ, ಅಗ್ರಹಾರಬಾಚಹಳ್ಳಿ ಶ್ರೀಹುಣಸೇಶ್ವರ, ಶ್ರೀಅಮೃತೇಶ್ವರ ದೇವಾಲಯ, ಸಾರಂಗಿಯ ಶ್ರೀರಾಮೇಶ್ವರ ಹಾಗೂ ಶ್ರೀ ಈಶ್ವರ ದೇವಾಲಯ, ಬಲ್ಲೇನಹಳ್ಳಿ, ಮಲ್ಲೇನಹಳ್ಳಿ, ಜಿ.ಬೊಪ್ಪನಹಳ್ಳಿ, ಬಿ.ಗಂಗನಹಳ್ಳಿ ಶಿವಾಲಯಗಳಲ್ಲಿ, ಪಟ್ಟಣದ ಶ್ರೀಮಲ್ಲಿಕಾರ್ಜುನ-ಭ್ರಮರಾಂಭ ದೇವಾಲಯ, ಅಂಬೇಡ್ಕರ್ ನಗರ ಶ್ರೀಶನೇಶ್ವರ ದೇವಾಲಯ, ದೊಡ್ಡಗಾಡಿಗನಹಳ್ಳಿ ಅರ್ಚಕ ರಂಗೇಗೌಡರ ನೇತೃತ್ವದ ಶ್ರೀಶನೇಶ್ವರ ದೇವಾಲಯ, ಗಾಡಿಗನಗಳ್ಳಿ ಜೋಡಿಲಿಂಗೇಶ್ವರ ದೇವಾಲಯ, ಕಾಪನಹಳ್ಳಿ ಬಿಳಿಕಲ್ ಬಾರೆ ಶ್ರೀ ಶನೇಶ್ವರ ದೇವಾಲಯ, ಅಂಬಿಗರಹಳ್ಳಿ ತ್ರಿವೇಣಿ ಸಂಗಮ ಹಾಗೂ ಪುರ ಗ್ರಾಮದ ಶ್ರೀಮಲೆ ಮಹದೇಶ್ವರ ದೇವಾಲಯ, ಚಿಕ್ಕಗಾಡಿಗನಹಳ್ಳಿಯ ಕಾಡು ಬಸವೇಶ್ವರ ದೇವಾಲಯ, ಮೋದೂರಿನ ಶ್ರೀ ರಾಮಲಿಂಗೇಶ್ವರ ದೇವಾಲಯ ಸೇರಿದಂತೆ ತಾಲ್ಲೂಕಿನ ಎಲ್ಲಾ ಶಿವಾಲಯಗಳಲ್ಲಿ ಸಡಗರ ಸಂಭ್ರಮದಿಂದ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಯಿತು.ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ ರಾಮೇಗೌಡ, ಸೇರಿದಂತೆ ವಿವಿಧ ಗಣ್ಯರು ಹಲವು ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.