ಸಾರಾಂಶ
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 50 ಲಕ್ಷಕ್ಕೂ ಅಧಿಕ ವಸತಿ ರಹಿತ ಕುಟುಂಬಗಳಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯಾದ್ಯಂತ ವಸತಿ ರಹಿತರ ಮತ್ತು ನಿವೇಶನ ರಹಿತರ ಗಣತಿ ನಡೆಸಿ, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಸೂರು ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ವಸತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯವರು ಗುರುವಾರ ಪ್ರತಿಭಟಿಸಿದರು.ನಗರದ ಹೊರ ವಲಯದ ಕೆ.ಆರ್. ಮಿಲ್ಸ್ ಕಾಲೋನಿ ಸಮುದಾಯ ಭವನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆಯಲ್ಲಿ ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 50 ಲಕ್ಷಕ್ಕೂ ಅಧಿಕ ವಸತಿ ರಹಿತ ಕುಟುಂಬಗಳಿವೆ. ಮೈಸೂರು ಜಿಲ್ಲೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವಸತಿಗಾಗಿ 77549 ಅರ್ಜಿಗಳು, ನಿವೇಶನಕ್ಕಾಗಿ 41459 ಅರ್ಜಿಗಳು ಸಲ್ಲಿಕೆಯಾಗಿವೆ. ಕೇಂದ್ರ ಸರ್ಕಾರ ವಸತಿಗಾಗಿ ಇಟ್ಟಿರುವ ಹಣದ ಕಾಲು ಭಾಗವನ್ನು ಉಪಯೋಗಿಸದೇ ಹಾಗೆ ಉಳಿಸಿದೆ. ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಅರ್ಜಿ ಸ್ವೀಕರಿಸದೆ, ರಾಜೀವ್ ಗಾಂಧಿ ವಸತಿ ನಿಗಮದ ವೆಬ್ ಸೈಟ್ ಗೆ ಅಪ್ ಲೋಡ್ ಮಾಡದಿರುವುದೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು.ಹೀಗಾಗಿ, ರಾಜ್ಯ ಸರ್ಕಾರವು ರಾಜ್ಯಾದ್ಯಂತ ವಸತಿ ರಹಿತರ ಮತ್ತು ನಿವೇಶನ ರಹಿತರ ಗಣತಿ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಮತ್ತು ಮನೆಗಾಗಿ ವಸತಿ ಮತ್ತು ನಿವೇಶನ ರಹಿತರ ಅರ್ಜಿಗಳನ್ನು ಸ್ವೀಕರಿಸಿ, ರಾಜೀವ್ ಗಾಂಧಿ ವಸತಿ ನಿಗಮದ ವೆಬ್ ಸೈಟ್ ನಲ್ಲಿ ನಮೂದಿಸಬೇಕು. ವಸತಿ ಸಹಾಯಧನವನ್ನು ಕನಿಷ್ಠ 5 ಲಕ್ಷ ರೂ.ಗೆ ಹೆಚ್ಚಿಸಬೇಕು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸರ್ಕಾರವೇ ಮನೆ ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.ಸಮಿತಿ ಅಧ್ಯಕ್ಷ ಎಚ್.ಬಿ. ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸೋಮರಾಜೇ ಅರಸು, ಉಪಾಧ್ಯಕ್ಷೆ ಆರ್. ಲಕ್ಷ್ಮಿ, ಮುಖಂಡರಾದ ಎನ್.ಕೆ. ದೇವದಾಸ್, ರಾಜು, ಲೋಕೇಶ್, ಧನಪಾಲ್, ಕೆಂಪಯ್ಯ ಮೊದಲಾದವರು ಇದ್ದರು.