ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಸಾವಿಲ್ಲ ಎಂದು ತೋರಿಸಿಕೊಟ್ಟ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಬಣ್ಣಿಸಿದರು.ಕಿಕ್ಕೇರಿಯ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ಗೆ ಭೇಟಿ ನೀಡಿ ಟ್ರಸ್ಟ್ ಪ್ರಕಟಿಸಿರುವ ಹಲವು ಪುಸ್ತಕಗಳನ್ನು ವೀಕ್ಷಣೆ ಮಾಡಿ, ಕೆಎಸ್‌ಎನ್ ನಮ್ಮ ಜಿಲ್ಲೆಯವರು ಎನ್ನುವುದೇ ಬಲುದೊಡ್ಡ ಹೆಮ್ಮೆ. ಇವರ ಹೆಸರಿನಲ್ಲಿ ಶಾಶ್ವತ ಕೆಲಸಗಳು ಆಗಬೇಕಿದೆ ಎಂದರು.
ಕವಿಯ ಮನಸ್ಸು ಮಲ್ಲಿಗೆಯಂತಿದ್ದು, ನಾಡಿನ ಪರಿವರ್ತನೆಗೆ ನಾಂದಿಯಾಗಿರಬೇಕು ಎನ್ನುವುದರಲ್ಲಿ ಮೊದಲಿಗರಾದ್ದ ಮೈಸೂರ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಸುಗಮ ಸಂಗೀತಕ್ಕೆಗಟ್ಟಿಯಾದ ನೆಲೆಯನ್ನು ಕಟ್ಟಿಕೊಟ್ಟರು ಎಂದರು.ಕನ್ನಡತನ, ಭಾಷೆಗೆ ಮಬ್ಬುಕವಿಯುವಂತಹ ಸ್ಥಿತಿಯಲ್ಲಿ ಕಾವ್ಯದ ಮೂಲಕ ಅಸ್ಮಿತೆ ಕಾಪಾಡಿದ ಶ್ರೇಷ್ಟಕವಿಗಳಲ್ಲಿ ಇವರು ಒಬ್ಬರು. ಪಾಶ್ಚಾತ್ಯ ಗೀತೆ, ಗಾಯನದ ಅಬ್ಬರದಲ್ಲಿ ಯುವಕರು ಕೊಚ್ಚಿ ಹೋಗುವಂತಹ ಕಾಲಘಟ್ಟದಲ್ಲಿ ಸುಗಮ ಸಂಗೀತದ ಮೂಲಕ ಕವಿಗಳ ಕಾವ್ಯ ಉಸಿರಾಡುವಂತಾಗಿ ಕನ್ನಡ ಭಾಷೆಗೆ ಸಾವಿಲ್ಲ ಎಂದು ತೋರಿಸಿದರು ಎಂದರು.
ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಸಾವು ಕಂಡರೂ ನಾಡಿಗೆ ಕಾವ್ಯ ಶ್ರೀಮಂತಿಕೆಯನ್ನು ಉಣಬಡಿಸಿದ ಮಹಾನ್ ಕವಿ ಕೆಎಸ್‌ಎನ್ ಹೆಸರಿನಲ್ಲಿ ಸ್ಮಾರಕ, ಉದ್ಯಾನವನ, ಬಳಸಿದ ವಸ್ತುಗಳ ಸಂಗ್ರಹಾಲಯ, ಥೀಮ್ ಪಾರ್ಕ್‌ನಂತಹ ಹಲವು ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಲಾಗುವುದು ಎಂದರು.ಕವಿಗಳ ಹೆಸರಿನಲ್ಲಿ ಕಮ್ಮಟ, ಶಾಲಾ ಕಾಲೇಜುಗಳಲ್ಲಿ ಕಾವ್ಯಗಾಯನದಂತಹ ಕೆಲಸವಾಗಬೇಕು. ಪಟ್ಟಣದ ಹೆಬ್ಬಾಗಿಲಿನಲ್ಲಿರುವ ಕೆ.ಎಸ್.ನರಸಿಂಹಸ್ವಾಮಿ ಅವರ ಸ್ವಾಗತ ಕಮಾನು ಪಟ್ಟಣದ ಘನತೆಗೆ ಕಿರೀಟದಂತಿದೆ. ಕವಿಯಿಂದ ಕಾಣಬೇಕಿರುವುದು ಉತ್ತಮ ಸಂದೇಶ. ಕಾವ್ಯ ಶ್ರೀಮಂತಿಕೆಯನ್ನು ಇಡೀ ವಿಶ್ವಕ್ಕೆ ನೀಡಿದ್ದಾರೆ ಎಂದರು.
ಕವಿಗಳ ಹೆಸರಿನಲ್ಲಿ ರಾಜ್ಯದ ಉದ್ದಗಲಕ್ಕೂ ಕಾವ್ಯಗಾಯನ, ಮೈಸೂರು ಮಲ್ಲಿಗೆ ನಾಟಕ, ಯಕ್ಷಗಾನ, ಹರಿಕಥೆಯಲ್ಲಿ ಕವಿಗಳ ಕಾವ್ಯ ಸಾದರ ಪಡಿಸುವಂತಹಯತ್ನ ನಡೆದಿರುವುದು ಟ್ರಸ್ಟ್‌ನ ವಿನೂತನ ಪ್ರಯೋಗವಾಗಿದೆ ಎಂದರು.ಈ ವೇಳೆ ಗಾಯಕ, ಟ್ರಸ್ಟ್ ಕಾರ್ಯದರ್ಶಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಅಮೀಬಾ ಸುರೇಶ್ ಮತ್ತಿತರರಿದ್ದರು.