ಮಂಗಳೂರು: ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಹೆರಿಗೆ ಶಸ್ತ್ರಚಿಕಿತ್ಸೆ (LSCS) ಮಾಡಿಸಿಕೊಂಡಿರುವ ರೋಗಿಯೊಬ್ಬರಲ್ಲಿ ಪತ್ತೆ ಹಚ್ಚಿರುವ ದೊಡ್ಡ ಅಂಡಾಶಯದ ಸಿಸ್ಟ್‌ನ್ನು ಯಶಸ್ವಿಯಾಗಿ ತೆಗೆದು ಹಾಕಲು 6.5 x 25.5 x 28.5 ಸೆಂ.ಮೀ ಅಳತೆಯ ದೊಡ್ಡ ಗಾತ್ರದ ಶಸ್ತ್ರಚಿಕಿತ್ಸೆ ನಡೆಸಲಾಯಿತು.ಲಾಪರೋಟಮಿ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 8 ಕಿಲೋಗ್ರಾಂ 300 ಗ್ರಾಂ ತೂಕದ ದೊಡ್ಡ ಎಡಅಂಡಾಶಯ ಸಿಸ್ಟ್‌ನ್ನು ತುಂಡಾಗದಂತೆ ತೆಗೆದು ಹಾಕುವುದರ ಜೊತೆಗೆ ಸಂಪೂರ್ಣ ಗರ್ಭಾಶಯ (ಟೋಟಲ್ಹಿಸ್ಟೆರಕ್ಟಮಿ) ಮತ್ತು ಬಲ ಅಂಡಾಶಯ (ಊಫರೆಕ್ಟಮಿ ಮತ್ತು ಸಲ್ಪಿಂಜೆಕ್ಟಮಿ)ನ್ನು ತೆಗೆದುಹಾಕಲಾಯಿತು.

ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರೊಫೆಸರ್ ಡಾ. ವಿಜಯಾ ಎಂ. ರೇವಣಕರ್ ಅವರ ಮಾರ್ಗದರ್ಶನದಲ್ಲಿ, ಡಾ. ಪೂರ್ವಿಕಾ ಆಚಾರ್ಯರ ಸಹಕಾರದೊಂದಿಗೆ, ಈ ಕ್ಲಿಷ್ಟಕರವಾದ ಸವಾಲಿನ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಅರಿವಳಿಕೆ ತಜ್ಞ ವಿಭಾಗದ ಡಾ. ಆತ್ಮಿಕ ಮತ್ತು ಆಪರೇಷನ್ ಥಿಯೇಟರ್ ಸಿಬ್ಬಂದಿ ನರ್ಸ್ ಮಿಸ್ ದಿಲ್ಜಾ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಸಹಕರಿಸಿದ್ದರು. ಈ ಕಠಿಣ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಯಾವುದೇ ತೊಡಕುಗಳಿಲ್ಲದೆ ಸರಾಗವಾಗಿ ಚೇತರಿಸಿಕೊಂಡಿದ್ದಾರೆ.

ಈ ಸಂದರ್ಭ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಪ್ರೊಫೆಸರ್ ಡಾ. ಪ್ರಸನ್ನ ಕುಮಾರ್ ಶೆಟ್ಟಿ ಕೆ.,ಡಾ. ಪೂಜಿತ ಮೂರ್ತಿ, ಸಹಾಯಕ ಪ್ರಾಧ್ಯಾಪಕರು, ಅನಸ್ತೇಶಿಯಾ ವಿಭಾಗದ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥ ಡಾ. ಅವನೀಶ್ ಭಂಡಾರಿ ಇದ್ದರು.

ಕ್ಷೇಮ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಬಿ. ಸಂದೀಪ್ ರೈ ಮತ್ತು ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುಮಲತಾ ಆರ್. ಶೆಟ್ಟಿ ಇವರು ಈ ವೈದ್ಯಕೀಯ ತಂಡವನ್ನು ಅಭಿನಂದಿಸಿದರು.