ರಾಮನಗರ ನಗರಸಭೆ ಅಧ್ಯಕ್ಷರಾಗಿ ಕೆ.ಶೇಷಾದ್ರಿ ಅವಿರೋಧ ಆಯ್ಕೆ

| Published : Dec 25 2024, 12:50 AM IST

ಸಾರಾಂಶ

31 ಮಂದಿ ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ನಿಂದ 11 ಮಂದಿ ಚುನಾಯಿತರಾಗಿದ್ದು, ಬಹುಮತದ ಕೊರತೆಯಿಂದಾಗಿ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಸಹಕಾರ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಿರೀಕ್ಷೆಯಂತೆ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಶೇಷಾದ್ರಿ (ಶಶಿ) ಮತ್ತು ಉಪಾಧ್ಯಕ್ಷರಾಗಿ ಆಯಿಷಾ ಬಾನು ಮಂಗಳವಾರ ನಡೆದ ಚುನಾವಣೆಯಲ್ಲಿ ಅ‍ವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡಿನ ಸದಸ್ಯ ಕೆ.ಶೇಷಾದ್ರಿ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡಿನ ಆಯಿಷಾ ಬಾನು ಅವರನ್ನು ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಬಿನೋಯ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

31 ಮಂದಿ ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ನಿಂದ 11 ಮಂದಿ ಚುನಾಯಿತರಾಗಿದ್ದು, ಬಹುಮತದ ಕೊರತೆಯಿಂದಾಗಿ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಸಹಕಾರ ನೀಡಿದರು.

ಕಾಂಗ್ರೆಸ್ಸಿಗರಿಂದ ವಿಜಯೋತ್ಸವ:

ನಗರಸಭಾ ಅಧ್ಯಕ್ಷರಾಗಿ ಶೇಷಾದ್ರಿ ಮತ್ತು ಉಪಾಧ್ಯಕ್ಷರಾಗಿ ಆಯಿಷಾ ಬಾನು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಘೋಷಣೆ ಮೊಳಗಿಸಿ ಸಂಭ್ರಮಿಸಿದರು. ಶೇಷಾದ್ರಿ ಬೆಂಬಲಿಗರು ತಮಟೆ, ಡೊಳ್ಳು ಸದ್ದಿನೊಂದಿಗೆ ವಿಜಯೋತ್ಸವ ಆಚರಿಸಿದರು.

ಶಾಸಕ ಇಕ್ಬಾಲ್ ಹುಸೇನ್ , ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ , ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದರು.

ವಿಪಕ್ಷದ ಸದಸ್ಯರಿಂದಲೂ ಅಭಿನಂದನೆ:

ಕಾಂಗ್ರೆಸ್ ಪಕ್ಷದಿಂದ ಶೇಷಾದ್ರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ, ಜೆಡಿಎಸ್ ಮುಖಂಡರು ಹಾಗೂ ಸದಸ್ಯರು ಹೂವಿನ ಹಾರ ಹಾಕಿ ಅಭಿನಂದಿಸಿದ್ದು ವಿಶೇಷವಾಗಿತ್ತು. ಜೆಡಿಎಸ್ ಮುಖಂಡ ಬಿ.ಉಮೇಶ್ ಸೇರಿದಂತೆ ಕೆಲ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಅಭಿನಂದಿಸಿ ನಗರದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭ ಹಾರೈಸಿದರು.

ಮೂವರು ಆಕಾಂಕ್ಷಿತರೊಂದಿಗೆ ಶಶಿ ನಾಮಪತ್ರ ಸಲ್ಲಿಕೆ:

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಾದ ದೌಲತ್ ಷರೀಫ್ , ನಿಜಾಮುದ್ದೀನ್ ಹಾಗೂ ಮುತ್ತುರಾಜು ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಮೂವರು ಸದಸ್ಯರು ಅಧಿಕಾರ ಹಂಚಿಕೆ ಸೂತ್ರಕ್ಕೂ ಒಪ್ಪಿಕೊಂಡಿದ್ದರು. ಆದರೆ, ಬಹುತೇಕ ಸದಸ್ಯರು ಕೆ.ಶೇಷಾದ್ರಿ (ಶಶಿ) ಅವರೇ ಅಧ್ಯಕ್ಷರಾಗಬೇಕೆಂದು ಅಭಿಮತ ವ್ಯಕ್ತಪಡಿಸಿದ್ದರು.

ಪಕ್ಷದೊಳಗೆ ಭಿನ್ನಮತ ಹಾಗೂ ಆಕಾಂಕ್ಷಿತ ಸದಸ್ಯರಲ್ಲಿನ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಕೆ.ಶೇಷಾದ್ರಿಯವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮೂವರು ಆಕಾಂಕ್ಷಿತರನ್ನು ಜೊತೆಯಲ್ಲಿಯೇ ಕರೆದೊಯ್ದು ಉಮೇದುವಾರಿಕೆ ಸಲ್ಲಿಸಿದ್ದು ವಿಶೇಷವಾಗಿತ್ತು.

ನಗರದ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಲು 6 ತಿಂಗಳು ಬೇಕು: ಕೆ.ಶೇಷಾದ್ರಿ

ಕನ್ನಡಪ್ರಭ ವಾರ್ತೆ ರಾಮನಗರ

ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಎಲ್ಲವನ್ನೂ ನಾನು ಒಂದೇ ದಿನದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕನಿಷ್ಠ 6 ತಿಂಗಳ ಕಾಲ ಅವಕಾಶ ಬೇಕಿದೆ. ಸದಸ್ಯರು, ಸಾರ್ವಜನಿಕರ ಸಹಕಾರ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕರ ನೆರವಿನಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ವಿರೋಧಪಕ್ಷದವರು ನಮಗೆ ಸಹಕಾರ ನೀಡಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಅವರ ಬೆಂಬಲವನ್ನು ಪಡೆದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ, ರಾಮನಗರವನ್ನು ರಾಜ್ಯದಲ್ಲೇ ಮಾದರಿ ನಗರಸಭೆಯನ್ನಾಗಿ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ರಾಮನಗರದ ಚಿತ್ರಣ ಬದಲಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅವರ ಸಹಕಾರದಿಂದಾಗಿ ನಗರಕ್ಕೆ ಹೆಚ್ಚಿನ ಅನುದಾನ ತಂದು ಪಟ್ಟಣವನ್ನು ಸ್ವಚ್ಛ ಹಾಗೂ ಪರಿಸರ ಸ್ನೇಹಿ ನಗರವಾಗಿ ರೂಪಿಸುತ್ತೇನೆ. ಪಟ್ಟಣದ ಸಮಸ್ಯೆಗಳ ಬಗ್ಗೆ ನಾವು ವಿಧಾನಸಭಾ ಚುನಾವಣೆಯಲ್ಲಿ ಇದೇನ್ ಕರ್ಮ ಅಭಿಯಾನದ ಹೆಸರಿನಲ್ಲಿ ಜನರ ಗಮನ ಸೆಳೆದಿದ್ದೆವು. ಪಟ್ಟಣದ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದೆವು. ಇದಕ್ಕೆ ಮತದಾರರು ಬೆಂಬಲ ನೀಡಿದ್ದು, ಈಗಾಗಲೇ ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಅರ್ಕಾವತಿ ನದಿ ಅಭಿವೃದ್ಧಿಗೆ 150 ಕೋಟಿ ರು. ಹಣ ಬಜೆಟ್ ನಲ್ಲಿ ಬಿಡುಗಡೆ ಮಾಡಿದೆ.

ತ್ಯಾಜ್ಯ ಸಮಸ್ಯೆಗೆ ಕ್ರಮ:

ನಗರ ವ್ಯಾಪ್ತಿಯಲ್ಲಿ ಚರಂಡಿಗಳ ನಿರ್ಮಾಣಕ್ಕೆ 87.50 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ರಾಮನಗರದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕಾದರೆ 1 ಸಾವಿರ ಕೋಟಿ ಹಣ ಬೇಕಾಗುತ್ತದೆ. ಇಷ್ಟೊಂದು ಹಣ ತರುವುದು ಸವಾಲಿನ ಕೆಲಸ, ಆದರೆ ನಾನು ಸಾಧ್ಯವಾದಷ್ಟು ಅನುದಾನ ತಂದು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಸ ವಿಲೇವಾರಿಗೆ ಈ ಹಿಂದೆ ಕಣ್ವ ಬಳಿ ಪಡೆಯಲಾಗಿದ್ದ ಜಾಗ ಸಮಸ್ಯೆಯಾದ ಬಳಿಕ ಪಟ್ಟಣದ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಸ್ಥಳವಿಲ್ಲದೆ ಸಮಸ್ಯೆಯಾಗಿದೆ. ತ್ಯಾಜ್ಯವಿಲೇವಾರಿಗೆ ಶೀಘ್ರ ಸ್ಥಳ ಗುರುತಿಸುವ ಕೆಲಸ ಮಾಡಲಾಗುವುದು. ನಗರಸಭೆಯ ಜೊತೆಗೆ ಸಾರ್ವಜನಿಕರು ನೆರವು ನೀಡಿದಲ್ಲಿ ತ್ಯಾಜ್ಯ ಸಮಸ್ಯೆ ಪರಿಹರಿಸಲಾಗುವುದು ಎಂದು ಕೆ.ಶೇಷಾದ್ರಿ ತಿಳಿಸಿದರು.

ನಗರಸಭಾ ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ.ಜಯಣ್ಣ ಇದ್ದರು.

‘ನಾನು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರಲಿಲ್ಲ. ರಾಜ್ಯಮಟ್ಟದ ನಿಗಮ ಮಂಡಳಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆ. ಆದರೆ, ಎಲ್ಲಾ ನಗರಸಭಾ ಸದಸ್ಯರು ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಒತ್ತಾಯ ಮಾಡಿದ್ದ ಪರಿಣಾಮ ನಾನು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ನನ್ನನ್ನು ಆಯ್ಕೆಮಾಡಿದ ಎಲ್ಲಾ ಸದಸ್ಯರು, ನಮ್ಮ ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ.’

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ,ರಾಮನಗರ.