ಸಾರಾಂಶ
ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆ-ಸೆಟ್ 2024 ಪರೀಕ್ಷೆ ಭಾನುವಾರ ನಗರದ 17 ಕೇಂದ್ರಗಳಲ್ಲಿ ನಡೆಯಿತು.ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆ ನಡೆದವು.
ಪರೀಕ್ಷೆಗೆ 7304 ಅಭ್ಯರ್ಥಿಗಳು ನೋಂದಣಿಯಾಗಿದ್ದು, 6244 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1060 ಅಭ್ಯರ್ಥಿಗಳು ಗೈರಾಗಿದ್ದರು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಆದೇಶದಂತೆ ಈ ಮೊದಲೇ ಜಿಲ್ಲಾಡಳಿತ ಪರೀಕ್ಷೆ ನಡೆಸುವ ಕುರಿತು ಸಕಲ ಸಿದ್ಧತೆ ಮಾಡಿಕೊಂಡಂತೆ, ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ, ಆಸನ, ಬಂದೋಬಸ್ತ್ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಗಮನ ಹರಿಸಲಾಗಿತ್ತು.
ಪರೀಕ್ಷಾ ಕೇಂದ್ರಕ್ಕೆ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತು, ಮೊಬೈಲ್ ಫೊನ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋಫೊನ್, ಬ್ಲೂ ಟೂಥ್ ಸಾಧನ, ಕೈ ಗಡಿಯಾರಗಳನ್ನು ಅನುಮತಿಸಿರಲಿಲ್ಲ, ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗೂ ತಿನ್ನುವುದನ್ನು ನಿಷೇಧಿಸಲಾಗಿತ್ತು. ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ಇರಲಿಲ್ಲ.
ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್‌ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ ಎಂದು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪರೀಕ್ಷಾ ಕೇಂದ್ರದ ಗೇಟು ಬಳಿಯೇ ಅಭ್ಯರ್ಥಿಗಳನ್ನು ಪರಿಶೀಲಿಸಿ ನಂತರ ಅವರನ್ನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ನೀಡಿದರು. ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಿಂದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.