ಸಾರಾಂಶ
ದಾವಣಗೆರೆ ನಗರದ 17 ಕೇಂದ್ರಗಳಲ್ಲಿ ನ.24ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿರುವ ಕೆ-ಸೆಟ್-2024 ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದ 17 ಕೇಂದ್ರಗಳಲ್ಲಿ ನ.24ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿರುವ ಕೆ-ಸೆಟ್-2024 ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೆ-ಸೆಟ್-2024 ಪರೀಕ್ಷೆಗೆ ಸಂಬಂಧಿಸಿದ ಪರಿವೀಕ್ಷಕರು, ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಆಯೋಗದ ನಿರ್ದೇಶನಗಳನ್ನು ಕಡ್ಡಾಯ ಪಾಲಿಸಬೇಕು. 7275 ಅಭ್ಯರ್ಥಿಗಳು, ಪರೀಕ್ಷೆ ಬರೆಯಲಿದ್ದಾರೆ. ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆಯು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಈ ಎರಡು ಪತ್ರಿಕೆಯ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ನಿಯೋಜಿತ ಸಿಬ್ಬಂದಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಸ್ವೀಕರಿಸುವಾಗ, ಪರೀಕ್ಷೆ ಮುಗಿದು ಬಂಡಲ್ ಮಾಡುವಾಗ ಜಾಗರೂಕತೆಯಿಂದ ಕಾಳಜಿ ವಹಿಸಬೇಕು ಎಂದರು.ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ:
ಪುರುಷ ಅಭ್ಯರ್ಥಿಗಳು ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್ ಧರಿಸುವಂತಿಲ್ಲ. ಅರ್ಧ ತೋಳಿನ ಶರ್ಟ್ (ಕಾಲರ್‌ರಹಿತ) ಮಾತ್ರ ಧರಿಸಬೇಕು. ಕಡಿಮೆ ಜೇಬುಗಳ ಸರಳ ಪ್ಯಾಂಟ್ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕುತ್ತಿಗೆ ಸುತ್ತ ಲೋಹಗಳ ಆಭರಣ ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗ ಧರಿಸಬಾರದು.ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ:
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳು, ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸಬೇಕು. ಎತ್ತರದ ಹಿಮ್ಮಡಿಯ ಶೂಗಳು- ಚಪ್ಪಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯ. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ, ಯಾವುದೇ ಆಭರಣ ಧರಿಸುವಂತಿಲ್ಲ ಎಂದು ವಿವರಿಸಿದರು.ನಿಷೇಧಿತ ವಸ್ತುಗಳ ಪಟ್ಟಿ:
ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು ಇತ್ಯಾದಿ ವಸ್ತುಗಳು ಹಾಗೂ ತಿನ್ನುವ ವಸ್ತುಗಳು, ನೀರನ ಬಾಟಲಿ ನಿಷೇಧಿಸಲಾಗಿದೆ, ಟೋಪಿ, ಯಾವುದೇ ರೀತಿಯ ಮಾಸ್ಕ್ ಕೂಡ ಧರಿಸುವಂತಿಲ್ಲ. ಪರೀಕ್ಷೆಯ ದಿನದಂದು ಪ್ರವೇಶ ಪತ್ರ, ಸರ್ಕಾರದಿಂದ ಮಾನ್ಯವಾದ ಪೋಟೋ ಗುರುತಿನ ಚೀಟಿ ತರುವುದು ಕಡ್ಡಾಯ. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗುವಂತಿಲ್ಲ. ಈ ನಿಯಮಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.ಸಭೆಯಲ್ಲಿ ಅಪರ ಡಿಸಿ ಪಿ.ಎನ್.ಲೋಕೇಶ್, ಡಿಡಿಪಿಯು ಕರಿಸಿದ್ದಪ್ಪ, ಡಿಡಿಪಿಐ ಜಿ.ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.
- - - -21ಕೆಡಿವಿಜಿ38: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಕೆ-ಸೆಟ್-2024 ಪರೀಕ್ಷೆಗೆ ಸಂಬಂಧಿಸಿದ ಪರಿವೀಕ್ಷಕರು, ಮಾರ್ಗಾಧಿಕಾರಿಗಳು, ವೀಕ್ಷಕರ ಸಭೆ ನಡೆಯಿತು.