ಸಾರಾಂಶ
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ. ಸೌಮ್ಯ ಅವಿರೋಧ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ.ಸೌಮ್ಯ ಅವಿರೋಧವಾಗಿ ಆಯ್ಕೆಯಾದರು.ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರುಕ್ಮಿಣಿ ಕಳೆದ ನಾಲ್ಕು ತಿಂಗಳ ಹಿಂದೆ ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷ ಪ್ರವೀಣ್ ಕಾರ್ಯನಿರ್ವಹಿಸಿದರು. ಹಿಂದುಳಿದ ವರ್ಗ ಅ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸದಸ್ಯೆ ಕೆ.ಸೌಮ್ಯ ಏಕೈಕ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕೆ.ಸೌಮ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಕಿರಣ್ ಗೌರಯ್ಯ ಘೋಷಣೆ ಮಾಡಿದರು. ಒಟ್ಟು 18 ಸದಸ್ಯರ ಪೈಕಿ ಮೂರು ಸದಸ್ಯರು ಗೈರು ಹಾಜರಾಗಿದ್ದರು. ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಲೋಹಿತ್ಅಭಿವೃದ್ಧಿ ಅಧಿಕಾರಿ ಸುಮೇಶ್ , ಉಪಾಧ್ಯಕ್ಷ ಪ್ರವೀಣ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ವಿಜಯೋತ್ಸವ : ಬಿಜೆಪಿ ಬೆಂಬಲಿತ ಸದಸ್ಯೆ ಕೆ.ಸೌಮ್ಯ ಗುಡ್ಡೆಹೊಸೂರು ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಗೌತಮ್, ಶಕ್ತಿ ಕೇಂದ್ರದ ಅಧ್ಯಕ್ಷ ಶಶಿಕುಮಾರ್, ಮುಖಂಡರಾದ ಎಂ.ಆರ್.ಉತ್ತಪ್ಪ, ಗಣೇಶ್, ಮಹೇಶ್, ಹರೀಶ್,
ಲಕ್ಷ್ಮಣ, ರಮೇಶ್, ಎಂ.ಅಭಿಷೇಕ್ , ಪ್ರಜ್ವಲ್ , ಜೆಡಿಎಸ್ ಬೆಂಬಲಿತ ಸದಸ್ಯ ಶಿವಪ್ಪ ಇದ್ದರು.