ಐಟಿಐ ಕಾಲೇಜು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದು ತುಂಬಾ ವಿರಳ, ಇಂತಹ ಸಂದರ್ಭದಲ್ಲಿ ಎಸ್.ಬಿ. ಎಜುಕೇಷನ್ ಟ್ರಸ್ಟ್ ವತಿಯಿಂದ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ ಎಂದು ತಿಳಿದು ಭಾಗವಹಿಸುವುದು ಮುಖ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಕ್ರೀಡೆ ಕಬಡ್ಡಿ ಎನ್ನುವುದು ಮಂಡ್ಯ ಜಿಲ್ಲೆಯ ಹಿರಿಮೆಯ ಪ್ರತೀಕವಾಗಿದೆ ಎಂದು ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ ತಿಳಿಸಿದರು.

ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆಯ ೨೫ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಡೆದ ಜಿಲ್ಲಾಮಟ್ಟದ ಐಟಿಐ ಕಬಡ್ಡಿ ಪಂದ್ಯಾವಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳೂ ಆಟೋಟಗಳಲ್ಲಿ ಮುಂದಿದ್ದಾರೆ. ಅದೇ ರೀತಿ ಐಟಿಐ ವಿದ್ಯಾರ್ಥಿಗಳೂ ಹೆಚ್ಚಿನ ಸಾಧನೆ ಮಾಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಸಿ.ಆರ್. ನಾಗರಾಜು ಮಾತನಾಡಿ, ಮಕ್ಕಳಿಗೆ ಪಾಠ, ಪ್ರವಚನಗಳ ಜೊತೆಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯಬಹುದು ಎಂದರು.

ಐಟಿಐ ಕಾಲೇಜು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದು ತುಂಬಾ ವಿರಳ, ಇಂತಹ ಸಂದರ್ಭದಲ್ಲಿ ಎಸ್.ಬಿ. ಎಜುಕೇಷನ್ ಟ್ರಸ್ಟ್ ವತಿಯಿಂದ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ ಎಂದು ತಿಳಿದು ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜು ಶೈಕ್ಷಣಿಕ ಪಾಲುದಾರ ಎಚ್.ಎಂ. ಶ್ರೀನಿವಾಸ್, ಐಟಿಐ ಕಾಲೇಜು ಪ್ರಾಂಶುಪಾಲ ಪ್ರವೀಣ್‌ ಕುಮಾರ್, ಪ್ರಸನ್ನ, ಸುರೇಶ್, ಪರಮೇಶ್, ಎಸ್.ಬಿ. ಎಜುಕೇಷನ್ ಟ್ರಸ್ಟ್ ಆಡಳಿತ ಅಧಿಕಾರಿ ತನ್ಮಯ್, ಕರ್ನಾಟಕ ತಂಡದ ಜೂನಿಯರ್ ಕಬಡ್ಡಿ ಚಾಂಪಿಯನ್‌ಷಿಪ್ ನಾಯಕಿ ಅಂಶಿ ಇತರರು ಹಾಜರಿದ್ದರು.