ಫೆ. 20, 21ರಂದು ನರೇಂದ್ರದಲ್ಲಿ ಕಬಡ್ಡಿ ಪಂದ್ಯಾವಳಿ: ಶಂಕರ ಕೋಮಾರದೇಸಾಯಿ

| Published : Feb 13 2024, 12:52 AM IST

ಫೆ. 20, 21ರಂದು ನರೇಂದ್ರದಲ್ಲಿ ಕಬಡ್ಡಿ ಪಂದ್ಯಾವಳಿ: ಶಂಕರ ಕೋಮಾರದೇಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಫೆ. 20 ಹಾಗೂ 21ರಂದು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಸಂಸದ ಕ್ರೀಡಾ ಮಹೋತ್ಸವದ ಭಾಗವಾಗಿ ಧಾರವಾಡ- 71 ಕ್ಷೇತ್ರದ ಕಬಡ್ಡಿ ಪಂದ್ಯಾವಳಿಯು ಫೆ. 20 ಹಾಗೂ 21ರಂದು ಸಮೀಪದ ನರೇಂದ್ರ ಗ್ರಾಮದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿಯಲ್ಲಿ ಮಾಹಿತಿ ನೀಡಿದ ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೊಮಾರದೇಸಾಯಿ, ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಧಾರವಾಡ ಕ್ಷೇತ್ರದ 56 ಹಳ್ಳಿಗಳ ಹಾಗೂ ಎಂಟು ವಾರ್ಡ್‌ಗಳ 18 ವರ್ಷ ಮೇಲ್ಪಟ್ಟವರು ತಮ್ಮ ತಂಡದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

ಪಂದ್ಯಾವಳಿಯಲ್ಲಿ ಟ್ರೋಫಿ ಸಹಿತ ಪ್ರಥಮ ಬಹುಮಾನ ₹40 ಸಾವಿರ, ದ್ವಿತೀಯ ಬಹುಮಾನ ₹20 ಸಾವಿರ, ತೃತೀಯ ಮತ್ತು ಚತುರ್ಥ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಅಲ್ಲದೇ ವೈಯಕ್ತಿಕ ಬೆಸ್ಟ್ ರೈಡರ್, ಕ್ಯಾಚರ್ ಮತ್ತು ಆಲ್‌ರೌಂಡರ್ ಗಳಿಗೆ ತಲಾ ₹5 ಸಾವಿರ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ಆಟಗಾರರಿಗೂ ಪ್ರಶಸ್ತಿ ಪತ್ರ ಮತ್ತು ಟಿ-ಶಟ್೯ಗಳನ್ನು ವಿತರಿಸಲಾಗುವುದು ಎಂದರು.

ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಈಗಾಗಲೇ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಬಡ್ಡಿ ಸ್ಪರ್ಧೆಗಳು ನಡೆದಿದ್ದು ಕೊನೆಯದಾಗಿ ಧಾರವಾಡದಲ್ಲಿ ನಡೆಯುತ್ತಿದೆ. ಪ್ರತಿ ವಿಧಾನಸಭೆಯ ವಿಜೇತ ನಾಲ್ಕು ತಂಡಗಳು ಧಾರವಾಡ ಲೋಕಸಭಾ ಕ್ಷೇತ್ರ ಮಟ್ಟದ ಸ್ಪರ್ಧೆಗೆ ಪ್ರವೇಶ ಪಡೆಯಲಿವೆ. ಈ ಸ್ಪರ್ಧೆಯ ವಿಜೇತ ತಂಡಕ್ಕೆ ₹1ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ ಎಂದ ಅವರು, ಮಹಿಳಾ ಪಂದ್ಯಾವಳಿಯೂ ಇದ್ದು, ವಿಧಾನಸಭಾ ಕ್ಷೇತ್ರ ಮಟ್ಟದ ಬದಲು ಅವು ನೇರವಾಗಿ ಧಾರವಾಡ ಲೋಕಸಭಾ ಮಟ್ಟದಲ್ಲಿ ನಡೆಸಲಾಗುವುದು ಎಂದರು.

ಫೆ. 20ರಂದು ಬೆಳಗ್ಗೆ 9ಕ್ಕೆ ಪಂದ್ಯಾವಳಿ ಶುರುವಾಗಲಿದ್ದು, ಸಂಜೆ 7ರ ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ನಂತರ ಚಲನಚಿತ್ರ‌ ಸಂಗೀತ ನಿರ್ದೇಶಕ ಗುರುಕಿರಣ ನೇತೃತ್ವದ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಜಾನಪದ ಗಾಯಕ ಮಾಳು ನಿಪ್ನಾಳ ಅವರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಶಂಕರ ಮುಗದ, ರುದ್ರಪ್ಪ ಅರಿವಾಳ, ಸಂಗನಗೌಡ ರಾಮನಗೌಡ್ರ, ಶಂಕರ ಶೆಳಕೆ, ಸುನೀಲ ಮೋರೆ, ರಾಕೇಶ ನಾಝರೆ, ಶ್ರೀನಿವಾಸ ಕೋಟ್ಯಾನ ಇದ್ದರು. ಇದೇ ಸಂದರ್ಭದಲ್ಲಿ ಪಂದ್ಯಾವಳಿಯ ಲಾಂಛನ ಅನಾವರಣ ಮಾಡಲಾಯಿತು.