ಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ಕಾಡಾ ತೀರ್ಮಾನ

| Published : Jul 30 2024, 12:33 AM IST

ಸಾರಾಂಶ

ನೀರಿನ ಲಭ್ಯತೆ ನೋಡಿಕೊಂಡು ಸೋಮವಾರದಿಂದಲೇ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಕಾಡಾ ಅಧ್ಯಕ್ಷ ಅಂಶುಮಂತ್‌ ಗೌಡ, ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಭದ್ರಾ ಅಚ್ಚಕಟ್ಟು ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೀರಿನ ಲಭ್ಯತೆ ನೋಡಿಕೊಂಡು ಸೋಮವಾರದಿಂದಲೇ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಕಾಡಾ ಅಧ್ಯಕ್ಷ ಅಂಶುಮಂತ್‌ ಗೌಡ, ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಭದ್ರಾ ಅಚ್ಚಕಟ್ಟು ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕಳೆದ ಬಾರಿ ಬರಗಾಲದಿಂದ ತತ್ತರಿಸಿ ಹೋಗಿದ್ದೆವು. ಈ ಬಾರಿ ಜಿಲ್ಲೆಯ ಎಲ್ಲಾ ಜಲಾಶಯ ಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಕೆಲವೊಂದು ಪ್ರದೇಶಗಳಿಗೆ ಈ ಬಾರಿಯೂ ನೀರು ತಲುಪಿಲ್ಲ ಎಂದು ರೈತರು ಆರೋಪಿಸಿದ ಹಿನ್ನೆಲೆ ಇಂದು (ಸೋಮವಾರ)ದಿಂದಲೇ ನಿರಂತರವಾಗಿ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದರು.

ರೈತರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಅನೇಕ ಕಡೆ ಭತ್ತ ಕೃಷಿಯನ್ನು ನಿಲ್ಲಿಸಿ, ಅಡಕೆ ಬೆಳೆ ಬೆಳೆಯಲಾಗುತ್ತಿದೆ. ಬೇಸಿಗೆಯಲ್ಲಿ ಅಡಕೆಗೆ ಹೆಚ್ಚು ನೀರು ಬೇಕಾಗುತ್ತದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರಾವರಿ ಎಂಜಿನಿಯರ್‌ಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ಚಾನಲ್‌ನಿಂದ ಅನಧಿಕೃತ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆಯುತ್ತಿದ್ದು, ಅದನ್ನು ನಿಲ್ಲಿಸಲು ಆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದರು.

ಕರ್ನಾಟಕದ ನೀರಾವರಿ ನಿಗಮದಿಂದ ಎಲ್ಲಾ ಶಾಸಕರ ಕ್ಷೇತ್ರಕ್ಕೆ ನೀರಾವರಿಗೆ ಮೊದಲ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆಗೆ ಈಗಾಗಲೇ ಡಿಸಿಎಂ ತೀರ್ಮಾನಿಸಿದ್ದಾರೆ. ಮಳೆಗೆ ಅನುಗುಣವಾಗಿ ಬೆಳೆಗೆ ತೊಂದರೆಯಾಗದ ರೀತಿಯಲ್ಲಿ ನೀರು ಬಿಡಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಸಲಹ ಸಮಿತಿಯಲ್ಲಿ ತೀರ್ಮಾನಿಸಿದಂತೆ ನೀರು ಬಿಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ. ಅಂಶುಮಾನ್, ಶಾಸಕರಾದ ಶಾರದ ಪೂರ್ಯಾನಾಯ್ಕ್‌, ಹರೀಶ್, ಬಲ್ಕಿಶ್‌ಬಾನು, ಶಾಂತನಗೌಡ, ಬಸವರಾಜ್, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ರೈತ ನಾಯಕ ಎಚ್.ಆರ್.ಬಸವರಾಜಪ್ಪ, ಕೆ.ಟಿ.ಗಂಗಾಧರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹಾಗೂ ಕಾಡಾದ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

- - -

ಬಾಕ್ಸ್‌ * ತುಂಗೆಯಿಂದ ಭದ್ರೆಗೆ ನೀರು ಯೋಜನೆ ತುಂಗೆಯಿಂದ ಭದ್ರೆಗೆ ನೀರು ಹರಿಸುವ ಯೋಜನೆ ಕೂಡ ಮುಂದಿನ ಭಾಗದಲ್ಲಿ ಕೈಗೆತ್ತಿಕೊಳ್ಳುತ್ತೇವೆ. ಇದಕ್ಕೆ ಕೋಟ್ಯಂತರ ರು. ಬೇಕಾಗಿದೆ. ಅದಕ್ಕಾಗಿ ನೀರಾವರಿ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ. ಅವರು 15 ದಿನದೊಳಗೆ ಶಿವಮೊಗ್ಗಕ್ಕೆ ಆಗಮಿಸಿ ಒಂದು ದಿನ ಪೂರ್ತಿ ನಮ್ಮದೊಂದಿಗೆ ಇದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು. -(ಫೋಟೋ: ಮಧು ಬಂಗಾರಪ್ಪ)

- - - -29ಎಸ್‌ಎಂಜಿಕೆಪಿ01:

ಶಿವಮೊಗ್ಗ ಹೊರವಲಯ ಮಲವಗೊಪ್ಪದಲ್ಲಿರುವ ಕಾಡಾ ಕಚೇರಿಯಲ್ಲಿ ಕಾಡಾ ಅಧ್ಯಕ್ಷ ಅಂಶುಮಂತ್‌ ಗೌಡ, ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸೋಮವಾರ ಭದ್ರಾ ಅಚ್ಚಕಟ್ಟು ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು.