ಸಾರಾಂಶ
ಉಪ್ಪಿನಂಗಡಿ: ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಕುಸಿತಗೊಂಡ ಸ್ಥಳಕ್ಕೆ ಬುದವಾರ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳ, ಎಸ್ ಡಿ ಎಂ ಸಿ ಪದಾಧಿಕಾರಿಗಳ, ಪೋಷಕರ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, ಈಗಾಗಲೇ ಧರಶಾಯಿಯಾಗಿರುವ ಕೊಠಡಿಗೆ ಹೊಂದಿಕೊಂಡಂತಿರುವ ಎಲ್ಲ ಕೊಠಡಿ ಸಹಿತಪಕ್ಕದಲ್ಲಿರುವ ಮುಖ್ಯಶಿಕ್ಷಕರ ಕೊಠಡಿಯನ್ನು ಎರಡು ದಿನದೊಳಗಡೆ ತೆರವು ಮಾಡಲಾಗುವುದು. ಶಾಲಾ ಪಕ್ಕದಲ್ಲಿರುವ ಖಾಸಗಿ ಕಟ್ಟಡವೊಂದನ್ನು ಪರಿಶೀಲನೆ ನಡೆಸಲಾಗಿದ್ದು, ಇಲ್ಲಿ ತರಗತಿ ನಡೆಸಲಾಗುವುದು. ಶಾಲೆಯಲ್ಲಿ ಲಭ್ಯವಿರುವ ಕೊಠಡಿಯಲ್ಲಿ ಕೆಲವು ತರಗತಿ ನಡೆಸಲಾಗುವುದು ಎಂದರು. ಕುಸಿತ ಕಟ್ಟಡ ಪರಿಶೀಲನೆ ನಡೆಸಿದ ಬಳಿಕ ಶಾಲೆಯಲ್ಲಿ ಶಾಸಕಿ ಅಧಿಕಾರಿಗಳ ಸಭೆ ನಡೆಸಿದರು. ಕಡಬ ತಹಸೀಲ್ದಾರ ಪ್ರಭಾಕರ ಖಜೂರೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಕಡಬ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಭವಾನಿ ಶಂಕರ್, ಜಿ.ಪಂ. ಎಂಜಿನಿಯರ್ ಭರತ್, ಪೆರಾಬೆ ಗ್ರಾ.ಪಂ ಅಧ್ಯಕ್ಷೆ ಸಂಧ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಬಾಣಬೆಟ್ಟು, ಸಿಆರ್‌ಪಿ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಆ.29ರಿಂದ ಎಂದಿನಂತೆ ತರಗತಿಗಳು ಆರಂಭವಾಗಲಿದೆ. ಲಭ್ಯವಿರುವ ಕೊಠಡಿಯಲ್ಲಿ ತರಗತಿಗಳು ನಡೆಯಲಿದ್ದು, ಶುಕ್ರವಾರದ ಬಳಿಕ ಖಾಸಗಿ ಕೊಠಡಿಯಲ್ಲಿ ಕೆಲವು ತರಗತಿಗಳು ನಡೆಯಲಿದೆ. ಈಗಾಗಲೇ ಗುರುತಿಸಲಾದ ಖಾಸಗಿ ಕೊಠಡಿ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.