ಬಂಟ್ವಾಳ ಜಯರಾಮ ಆಚಾರ್ಯಗೆ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ’

| Published : Oct 18 2024, 12:00 AM IST

ಬಂಟ್ವಾಳ ಜಯರಾಮ ಆಚಾರ್ಯಗೆ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ’
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳ ಜಯರಾಮ ಆಚಾರ್ಯ ಅವರು ಕಳೆದ 50 ವರ್ಷಗಳಿಂದ ಪಾತ್ರಗಳಿಗೆ ಹಾಸ್ಯರಸದ ಸ್ಪರ್ಶ ನೀಡಿ ಸಾವಿರಾರು ಸನ್ನಿವೇಶಗಳನ್ನು ರಂಜನೀಯವನ್ನಾಗಿಸಿ ಯಕ್ಷ ಪ್ರೇಕ್ಷಕರ ಮನಗೆದ್ದವರು. ಹಾಸ್ಯಪಾತ್ರಗಳೊಂದಿಗೆ ಗಂಭೀರ ಪಾತ್ರಗಳನ್ನೂ ಮಾಡಬಲ್ಲ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ದುಬೈ ಹಾಗೂ ಇನ್ನಿತರ ಹಲವಾರು ಕಡೆಯ ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಮಂಗಳೂರು

ಖ್ಯಾತ ಹಾಸ್ಯ ಕಲಾವಿದ, ಹಾಸ್ಯ ಚಕ್ರವರ್ತಿ ಎಂದೇ ಬಿರುದಾಂಕಿತ ಬಂಟ್ವಾಳ ಜಯರಾಮ ಆಚಾರ್ಯ ಇವರು 2024ರ ಸಾಲಿನ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅ.27 ರಂದು ಮಧ್ಯಾಹ್ನ 2 ಗಂಟೆಗೆ ನಗರದ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳಿಂದ ‘ಶ್ರೀರಾಮ ದರ್ಶನ’ ಹಾಗೂ ‘ದಮಯಂತಿ ಪುನಃ ಸ್ವಯಂವರ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಹಿಮ್ಮೇಳದಲ್ಲಿ ಮದ್ದಳೆ ವಾದಕರಾಗಿ ಪ್ರಸಿದ್ಧಿಯಾಗಿದ್ದ, ಅದರಲ್ಲೂ ಪದ್ಯಾಣ-ಕಡಬ ಜೋಡಿ ಎಂದೇ ಖ್ಯಾತಿ ಪಡೆದು ಕಣ್ಮರೆಯಾಗಿರುವ ದಿ.ಕಡಬ ನಾರಾಯಣ ಆಚಾರ್ಯ ಮತ್ತು ಅತೀ ಸಣ್ಣ ಪ್ರಾಯದಲ್ಲೇ ಇಹಲೋಕ ತ್ಯಜಿಸಿದ ಅವರ ಪುತ್ರ ದಿ.ಕಡಬ ವಿನಯ ಆಚಾರ್ಯರವರ ಹೆಸರನ್ನು ಶಾಶ್ವತವಾಗಿರಿಸಲು ಪ್ರತಿವರ್ಷವೂ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ಈ ವರ್ಷ 5 ನೇ ವಾರ್ಷಿಕೋತ್ಸವದಲ್ಲಿ ತುಳು ಹಾಗೂ ಪೌರಾಣಿಕ ಪ್ರಸಂಗಗಳಲ್ಲಿ ಹೆಸರು ಗಳಿಸಿರುವ ಜಯರಾಮ ಆಚಾರ್ಯ ಬಂಟ್ವಾಳ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.ಬಂಟ್ವಾಳ ಜಯರಾಮ ಆಚಾರ್ಯ ಅವರು ಕಳೆದ 50 ವರ್ಷಗಳಿಂದ ಪಾತ್ರಗಳಿಗೆ ಹಾಸ್ಯರಸದ ಸ್ಪರ್ಶ ನೀಡಿ ಸಾವಿರಾರು ಸನ್ನಿವೇಶಗಳನ್ನು ರಂಜನೀಯವನ್ನಾಗಿಸಿ ಯಕ್ಷ ಪ್ರೇಕ್ಷಕರ ಮನಗೆದ್ದವರು. ಹಾಸ್ಯಪಾತ್ರಗಳೊಂದಿಗೆ ಗಂಭೀರ ಪಾತ್ರಗಳನ್ನೂ ಮಾಡಬಲ್ಲ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ದುಬೈ ಹಾಗೂ ಇನ್ನಿತರ ಹಲವಾರು ಕಡೆಯ ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ ಎಂದು ಸುಂದರ ಆಚಾರ್ಯ ವಿವರ ನೀಡಿದರು.ಸಮಿತಿಯ ಗೌರವಾಧ್ಯಕ್ಷ ಜಿ.ಟಿ. ಆಚಾರ್ಯ ಮುಂಬೈ, ಕಾರ್ಯದರ್ಶಿ ಗಿರೀಶ್‌ ಕಾವೂರು, ಕೋಶಾಧಿಕಾರಿ ಡಿ.ಭಾಸ್ಕರ ಆಚಾರ್ಯ ಅಂಡಿಂಜೆ, ಉಪಾಧ್ಯಕ್ಷ ಜನಾರ್ದನ ಆಚಾರ್ಯ, ಜೊತೆ ಕಾರ್ಯದರ್ಶಿ ರಾಜೇಶ್‌ ಆಕಾಶಭವನ ಇದ್ದರು.