ಕೃಷಿ ಇಲಾಖೆಗೆ ಸೇರಿದ ತಾಲೂಕಿನ ಕಾಡಜ್ಜಿ ಗ್ರಾಮದ ಕೃಷಿ ಸಂಶೋಧನಾ ಕೇಂದ್ರದ 283 ಎಕರೆ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯಾದರೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳ ತಲೆದಂಡವಾಗಬೇಕು, ಮಣ್ಣು ಗಣಿಗಾರಿಕೆಯಾದ ಸ್ಥಳದ ಸ್ಯಾಟ್‌ ಲೈಟ್ ಸರ್ವೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಇಲಾಖೆಗೆ ಸೇರಿದ ತಾಲೂಕಿನ ಕಾಡಜ್ಜಿ ಗ್ರಾಮದ ಕೃಷಿ ಸಂಶೋಧನಾ ಕೇಂದ್ರದ 283 ಎಕರೆ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯಾದರೂ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳ ತಲೆದಂಡವಾಗಬೇಕು, ಮಣ್ಣು ಗಣಿಗಾರಿಕೆಯಾದ ಸ್ಥಳದ ಸ್ಯಾಟ್‌ ಲೈಟ್ ಸರ್ವೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಡಜ್ಜಿ ಗ್ರಾಮದ 283 ಎಕರೆ ಜಾಗದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿದ್ದು, ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಆಳಿನಂತೆ ವರ್ತಿಸುತ್ತಿದ್ದು, ಸ್ವತಃ ತಹಸೀಲ್ದಾರ್ ಸ್ಥಳದಲ್ಲಿ ಹಾಜರಿದ್ದು ಅಕ್ರಮ ಮಣ್ಣು ಗಣಿಗಾರಿಕೆ ನಡೆಯಲು ಕಾರಣವಾಗಿದ್ದಾರೆ ಎಂದರು.

ಜಿಲ್ಲಾ ಸಚಿವರ ಎಲ್ಲಾ ಅಕ್ರಮಗಳನ್ನು ಯಾವುದೇ ಮುಲಾಜಿಲ್ಲದೇ ವಿರೋಧಿಸಿಕೊಂಡೇ ಬಂದಿದ್ದೇವೆ. ಯಾವುದೇ ಸರ್ಕಾರಿ ಜಾಗವಿದ್ದರೂ ಅಲ್ಲಿರುವ ಮಣ್ಣನ್ನು ತರಿಸಿಕೊಂಡು, ತಮ್ಮ ಸ್ವಂತ ಜಾಗಕ್ಕೆ ಹಾಕಿಸಿಕೊಳ್ಳುವ ಕೆಲಸ ಸಚಿವರು ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅನುಮತಿ ಪಡೆಯುತ್ತಿಲ್ಲ, ಸರ್ಕಾರಕ್ಕೆ ರಾಯಲ್ಟಿ ಕಟ್ಟುತ್ತಿಲ್ಲ. ತೋರಿಕೆಗೆ ಒಂದಿಷ್ಟು ರಾಯಲ್ಪಿ ಕಟ್ಟಿದರೂ ಇಲಾಖೆ, ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.

ದಿವಂಗತ ಶಾಮನೂರು ಶಿವಶಂಕರಪ್ಪನವರ ಸಮಾರಾಧನೆ ಹೆಸರಿನಲ್ಲಿ ಕಾಡಜ್ಜಿ ಕೃಷಿ ಕೇಂದ್ರದ ಬಳಿ 283 ಎಕರೆ ಮಣ್ಣನ್ನು ಆನೆಕೊಂಡದ ಕಲ್ಲೇಶ್ವರ ಮಿಲ್ ಹಿಂಭಾಗದ ಸಚಿವರ ಜಮೀನುಗಳಿಗೆ ತಂದು ಸುರಿದು, ಸಮತಟ್ಟು ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಸಚಿವರೇ ತಮ್ಮ ಇಲಾಖೆ ಅಧಿಕಾರಿಗಳನ್ನು, ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಆಡಳಿತ, ತಾಲೂಕು ಆಡಳಿತಗಳೇ ಮುಂದೆ ನಿಂತು, ಅಕ್ರಮ ಮಣ್ಣು ಗಣಿಗಾರಿಕೆ ಮಾಡಿಸುತ್ತಿವೆ ಎಂದು ದೂರಿದರು.

ಪಿಡಿಒಗಳಿಂದ ಡಿಸಿವರೆಗೆ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಬಾತಿ ಗ್ರಾಮದ ಬಳಿ, ಕಾಡಜ್ಜಿ ಗ್ರಾಮದ ಕೃಷಿ ಇಲಾಖೆ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ಆಗಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಕೃಷಿ ಇಲಾಖೆಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಮಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳುತ್ತಾರೆ. ಸಚಿವರ ಹಿಂಬಾಲಕರೂ ಸಹ ಅಲ್ಲಿ ಅಕ್ರಮವಾಗಿ ಜೆಸಿಬಿ, ಲಾರಿಗಳನ್ನು ಬಳಸಿ ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ತಡೆಯಬೇಕು. ಕಾಡಜ್ಜಿ ಕೃಷಿ ಕೇಂದ್ರದ ಮಣ್ಣು ಲೂಟಿ ಹಿನ್ನೆಲೆಯಲ್ಲಿ ಸಚಿವರನ್ನು ಸಂಪುಟದಿಂದ ವಜಾ ಮಾಡಿ, ತನಿಖೆಗೊಳಪಡಿಸಬೇಕು. ಕೃಷಿ ಅಧಿಕಾರಿಗಳು ಈಗ ಎಫ್ಐಆರ್ ಮಾಡಿಸಿದ್ದೇವೆನ್ನುತ್ತಿದ್ದಾರೆ ಎಂದರು.

ಜಿಲ್ಲಾ ಆಡಳಿತ ಪಕ್ಷದ ಮುಖಂಡರಾದ ಎಚ್.ಎನ್.ಹಾಲೇಶ ನಾಯ್ಕ, ತಾರೇಶ ನಾಯ್ಕ, ಬಿ.ವಿ.ಜಯರುದ್ರಪ್ಪ, ಕಾಡಜ್ಜಿ ಬಸವರಾಜ ಇತರರು ಇದ್ದರು.

ಸಚಿವರ ಮಿಲ್ ಬಳಿ ಸಾವಿರಾರು ಟನ್ ಮಣ್ಣು

ಕಾಡಜ್ಜಿ ರೈತರು ಅಲ್ಲಿನ 80-100 ಎಕರೆ ಭೂಮಿಯಲ್ಲಿ ಕೆರೆ ಮಾಡಬೇಕೆಂದು, ಭೂಮಿ ನೀಡಿದ್ದಾರೆ. ಆದರೆ, ಜಿಲ್ಲಾ ಸಚಿವರು ರೈತರ ಆಶಯಕ್ಕೆ ಸ್ಪಂದಿಸದೇ ಕಲ್ಲೇಶ್ವರ ಮಿಲ್ ಹಿಂಭಾಗದ ತಮ್ಮ ಜಮೀನಿಗೆ ಬೇಕಾದ ಸಾವಿರಾರು ಟನ್ ಕೃಷಿ ಮಣ್ಣನ್ನು ತಂದು ಹಾಕಿಕೊಂಡಿದ್ದಾರೆ. ಕಾಡಜ್ಜಿಯ 283 ಎಕರೆಯಲ್ಲಿ 33 ಅನಧಿಕೃತ ಜಾಗವಿದ್ದು, ಸಚಿವರ ಹಿಂಬಾಲಕರು, ಅನಾಮಧೇಯ ವ್ಯಕ್ತಿಗಳು ಅಲ್ಲಿನ ಮಣ್ಣು ಲೂಟಿ ಮಾಡುತ್ತಿದ್ದಾರೆ ಎಂದು ಲೋಕಿಕೆರೆ ನಾಗರಾಜ ದೂರಿದರು.