ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಡಾ.ರಾಜ್‌ಕುಮಾರ್ ಅಭಿನಯದ ''''ಬಂಗಾರದ ಮನುಷ್ಯ'' ದಂಥ ಮೌಲ್ಯಯುತ ಚಿತ್ರಗಳು ಸಾವಿರಾರು ಮಂದಿಗೆ ಬದುಕು ಕಟ್ಟಿಕೊಟ್ಟಿವೆ ಎಂದು ಮಾಜಿ ಸಚಿವರೂ ಆದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಶ್ರೀ ಮಹರ್ಷಿ ವಾಲ್ಮೀಕಿ ಪ್ರಬುದ್ಧ ವೇದಿಕೆಯು ರಾಜರಾಜೇಶ್ವರಿ ನಗರದ ಪೈಲ್ವಾನ್ ಬಸವಯ್ಯ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕ಼ಡಕೊಳದ ರಂಗಪ್ಪ ಅವರ ಪುತ್ರ ಶ್ರೀನಿಧಿ ಅಭಿನಯದ ರಂಗು ರಂಗು ಆಲ್ಬಂ ಸಾಂಗ್ ಬಿಡುಗಡೆ ಮಾಡಿ, ನಾಯಕನಟನಾಗಿ ನಟಿಸುತ್ತಿರುವ ಪತ್ರಕರ್ತ ಹಾಗೂ ಮೆರಿಟ್ ಚಿತ್ರಗಳಿಗೆ ಶುಭ ಹಾರೈಸಿ ಅವರು ಮಾತನಾಡಿ, ಒಳ್ಳೆಯ ಕಥೆ, ಕಾದಂಬರಿಗಳನ್ನು ಸಿನಿಮಾ ಮಾಡಿದರೆ ಜನ ನೋಡಿ ಪ್ರಭಾವಿತರಾಗುತ್ತಾರೆ. ನಾನಂತೂ ಬಂಗಾರದ ಮನುಷ್ಯ ಚಿತ್ರವನ್ನು ನೋಡಿಯೇ ನನ್ನ ಬದುಕನ್ನು ರೂಪಿಸಿಕೊಂಡೆ ಎಂದು ಸ್ಮರಿಸಿದರು.
ಚಿತ್ರರಂಗದಲ್ಲಿ ತಳ ಸಮುದಾಯದಿಂದ ಬಂದಿರುವ ಕಿಚ್ಚ ಸುದೀಪ್ ಗಟ್ಟಿಯಾಗಿ ನಿಂತು ಒಳ್ಳೆಯ ಹೆಸರು ಮಾಡಿದ್ದಾರೆ. ಅದೇ ರೀತಿ ಎತ್ತರದ ನಿಲುವು, ಸುರದ್ರೂಪಿ ಆಗಿರುವ ಶ್ರೀನಿಧಿ ಕೂಡ ಧೈರ್ಯದಿಂದ, ಸವಾಲು ಸ್ವೀಕರಿಸಿ, ಗಟ್ಟಿಯಾಗಿ ಉಳಿಯುವಂತೆ ಅಭಿನಯಿಸಬೇಕು ಎಂದು ಅವರು ಆಶಿಸಿದರು.ಶಶಿಕುಮಾರ್ ಅವರು ಚಿತ್ರರಂಗದಲ್ಲಿ ಹೆಸರು ಮಾಡಿ ನಂತರ ರಾಜಕೀಯ ರಂಗಕ್ಕೆ ಬಂದರು. ಒಂದು ಹಿಟ್ ಸಿನಿಮಾ ನೀಡಿದರೆ ನಾಯಕ ನಟ ಮುಂದೆ ದೊಡ್ಡ ಹೀರೋ ಆಗಿ ಬೆಳೆಯುತ್ತಾನೆ ಎಂದು ಅವರು ಹೇಳಿದರು.
ಸಂಗೀತ ನಿರ್ದೇಶಕ ಡಾ.ವಿ. ನಾಗೇಂದ್ರಪ್ರಸಾದ್ ಮಾತನಾಡಿ, ಮೈಸೂರು ಕಲಾವಿದರ ನಗರ, ಸಾಂಸ್ಕೃತಿಕ ತವರು. ಇಲ್ಲಿನ ಕಲಾವಿದರು ಬೆಂಗಳೂರಿನಲ್ಲಿ ಮೆರೆಯುವಂತೆ ಬೆಳೆಯಬೇಕು ಎಂದರು.,ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಇನ್ನೂ ಗಟ್ಟಿಯಾಗಿ ಬೆಳೆಯಬೇಕಾದ ಸಮುದಾಯದಿಂದ ಬಂದಿರುವ ಹೊಸ ನಾಯಕ ನಟ ಶ್ರೀನಿಧಿ ಅವರಿಗೆ ಜನ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಪತ್ರಕರ್ತ ಚಿತ್ರದ ನಿರ್ಮಾಪಕ ಮೂರ್ತಿ ಕುಮಾರ್, ಮೆರಿಟ್ ಚಿತ್ರದ ನಿರ್ದೇಶಕ ವಿನೋದ್, ನಾಯಕ ನಟ ಶ್ರೀನಿಧಿ, ಗುಂಡ್ಲುಪೇಟೆಯ ಮಲ್ಲೇಶ್, ಬಿಜೆಪಿ ಮುಖಂಡ ಎಂ. ಅಪ್ಪಣ್ಣ, ಉದ್ಯಮಿ ನಿಂಗರಾಜು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ನಿರ್ದೇಶಕ ನಾಗೇಶ್, ಲೋಕೇಶ್ ಸೇರಿದಂತೆ ಹಲವಾರು ಮುಖಂಡರು ಇದ್ದರು. ಶ್ರೀ ಮಹರ್ಷಿ ವಾಲ್ಮೀಕಿ ಪ್ರಬುದ್ಧ ವೇದಿಕೆಯ ಅಧ್ಯಕ್ಷ ಜೆ.ಎಂ. ಜವರನಾಯಕ ಅಧ್ಯಕ್ಷತೆ ವಹಿಸಿದ್ದರು.ಹುಣಸೂರು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಹರದನಹಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು.