ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಬಾಳೆಮುಹೂರ್ತದ ಸಂದರ್ಭದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದಂಗವಾಗಿ ಜಿಲ್ಲೆಯ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬಾಳೆ ಕೃಷಿ ಹಾಗೂ ಬಾಳೆಯ ಮಹತ್ವವನ್ನು ಆಧರಿಸಿದ ಚಿತ್ರಕಲಾ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಒಟ್ಟು 162 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾಪ್ರತಿಭೆ ಅನಾವರಣಗೊಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸೋದೆ ಶ್ರೀ ವಾದಿರಾಜ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು ಪ್ರಶಂಸನಾ ಪತ್ರ ಹಾಗೂ ಶ್ರೀ ದೇವರ ಪ್ರಸಾದವನ್ನು ನೀಡಿ ಹರಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಗಂಗಾಧರ ರಾವ್, ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕಲಾರಂಗದ ಸದಸ್ಯರು ಹಾಗೂ ಸೋದೆ ವಾದಿರಾಜ ಮಠದ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಮೂಡಿಬಂದ ಚಿತ್ರಕೃತಿಗಳ ಪೈಕಿ ಅತ್ಯುತ್ತಮ ಐದು ಚಿತ್ರಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಚಿತ್ರಗಳ ವಿದ್ಯಾರ್ಥಿ ಕಲಾವಿದರಿಗೆ ಡಿ. 1ರಂದು ಸಂಜೆ ನಡೆಯಲಿರುವ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು.