ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಮತ್ತಷ್ಟು ಬಲ

| Published : Dec 09 2024, 12:49 AM IST

ಸಾರಾಂಶ

ಪ್ರತ್ಯೇಕ ಜಿಲ್ಲೆಗೆ ಶಾಸಕರ ಬೆಂಬಲ ಅಗತ್ಯವಾಗಿದೆ. ಅವರು ವಿಧಾನಸಭೆಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಬೇಕು.

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಯ ಕೂಗು ದಿನದಿಂದ ಹೆಚ್ಚಾಗುತ್ತಿದ್ದು, ಇದಕ್ಕೆ ಪುಷ್ಟಿ ಎಂಬಂತೆ ಶನಿವಾರ ನಗರದ ಶಿವಾಜಿ ಚೌಕದ ಗಣಪತಿ ಮಂಟಪದಲ್ಲಿ ನಡೆದ ಸಭೆಯು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಕನ್ನಡ ಕದಂಬ ಜಿಲ್ಲೆ ಹೋರಾಟ ಹಾಗೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮತ್ತು ಎಲ್ಲ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಪ್ರತ್ಯೇಕ ಜಿಲ್ಲೆ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಸಂಕಲ್ಪ ಮಾಡಿದರು.ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿಗೆ ಉಪೇಂದ್ರ ಪೈ ಅಧ್ಯಕ್ಷರಾಗಿದ್ದಾರೆ. ಆದರೆ, ಸಮಿತಿ ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಕಾರ್ಯಚಟುವಟಿಕೆ ನಡೆಸಿರಲಿಲ್ಲ. ಅನಂತಮೂರ್ತಿ ಹೆಗಡೆ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಹೀಗಾಗಿ ಸಮಿತಿಯ ಸದಸ್ಯರಿಗೂ, ಸಾರ್ವಜನಿಕರಲ್ಲಿಯೂ ಶಿರಸಿ ಜಿಲ್ಲೆ ಹೋರಾಟ ಇಬ್ಭಾಗವಾಗಿದೆ. ಉಪೇಂದ್ರ ಪೈ ಸಹ ಸುದ್ದಿಗೋಷ್ಠಿ ನಡೆಸಿ, ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ನಾನೇ ಆಗಿದ್ದೇನೆ. ಯಾರಿಗೂ ಬಿಟ್ಟುಕೊಡಲಿಲ್ಲ ಎಂದು ಖಾರವಾಗಿಯೇ ನುಡಿದಿದ್ದರು.ಸಭೆಯಲ್ಲಿ ಉಪೇಂದ್ರ ಪೈ ಮಾತನಾಡಿ, ಪ್ರತ್ಯೇಕ ಜಿಲ್ಲೆಗೆ ಶಾಸಕರ ಬೆಂಬಲ ಅಗತ್ಯವಾಗಿದೆ. ಅವರು ವಿಧಾನಸಭೆಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಬೇಕು. ಆದರೆ, ನಾವು ಸಂಪರ್ಕಿಸಿದಾಗ ಯಾವುದೇ ಶಾಸಕರು ಅಥವಾ ರಾಜಕಾರಣಿಗಳು ಸಾಧ್ಯವಿಲ್ಲ ಎನ್ನುತ್ತಿಲ್ಲ. ವಿಧಾನಸಭೆಯಲ್ಲಿ ಪ್ರಬಲ ಧ್ವನಿ ಎತ್ತುತ್ತಿಲ್ಲ. ಇನ್ನು ಮುಂದೆ ಹೋರಾಟವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡಬೇಕಿದೆ ಎಂದರು.ಅನಂತಮೂರ್ತಿ ಹೆಗಡೆ ಮಾತನಾಡಿ, ನನ್ನ ಪ್ರತಿ ಹೋರಾಟಕ್ಕೆ ಉಪೇಂದ್ರ ಪೈ ಅವರೂ ಪ್ರೇರಣೆಯಾಗಿದ್ದಾರೆ. ನನ್ನ ಹೋರಾಟದ ಮೂಲ ಉದ್ದೇಶ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು ಎಂಬುದಾಗಿದೆ. ಆದರೆ, ಜಿಲ್ಲೆಗೆ ಒಂದು ಆಸ್ಪತ್ರೆ ಎಂಬ ಸರ್ಕಾರದ ಧೋರಣೆಯಿಂದ ಪ್ರತ್ಯೇಕ ಜಿಲ್ಲಯನ್ನಾಗಿಸಿಯಾದರೂ ಆಸ್ಪತ್ರೆಯನ್ನು ಪಡೆಯಬೇಕು ಎಂಬ ಛಲದಿಂದ ಈ ಹೋರಾಟ ನಡೆಸಿದ್ದೇನೆ. ಪ್ರತ್ಯೇಕ ಜಿಲ್ಲೆಗಾಗಿ ಪ್ರತಿ ಹೋರಾಟಕ್ಕೂ ನಾನು ಉಪೇಂದ್ರ ಪೈ ಅವರಿಗೆ ಆಹ್ವಾನ ನೀಡಿದ್ದೇನೆ. ಕೆಲವರು ನಾನು ರಾಜಕೀಯಕ್ಕಾಗಿ ಈ ಹೋರಾಟ ನಡೆಸುತ್ತಿದ್ದೇನೆ ಎಂದು ತಪ್ಪು ತಿಳಿದಿದ್ದಾರೆ. ಹೋರಾಟಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ಹೋರಾಟ ಮಾಡಿದ ಮಾತ್ರಕ್ಕೆ ಮತ ಬೀಳುವುದಿಲ್ಲ. ಪ್ರತ್ಯೇಕ ಜಿಲ್ಲೆ ನನ್ನ ಗುರಿಯೇ ಹೊರತೂ ನಾಯಕತ್ವವಲ್ಲ. ಉಪೇಂದ್ರ ಪೈ ಅವರು ಕರೆಯುವ ಹೋರಾಟಕ್ಕೆ ನಾನು ತಪ್ಪದೇ ಬರುತ್ತೇನೆ ಎಂದರು.ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಶಿರಸಿ ಜಿಲ್ಲೆಯ ಆಗ್ರಹ ಪಕ್ಷಾತೀತ, ಜ್ಯಾತ್ಯತೀತ. ಅದರಂತೆ ಬನವಾಸಿ ತಾಲೂಕಾಗಿ ಅಭಿವೃದ್ಧಿಯೆಡೆ ಸಾಗಬೇಕು ಎಂದರು.

ಹಿರಿಯ ಚಿಂತಕ ವಿಶ್ವನಾಥ ಶರ್ಮಾ ನಾಡಗುಳಿ ಮಾತನಾಡಿ, ಅನಂತಮೂರ್ತಿ ಹೆಗಡೆ ಹಾಗೂ ಉಪೇಂದ್ರಪೈ ಪ್ರತ್ಯೇಕ ಜಿಲ್ಲೆಗಾಗಿ ಅಭಿಮನ್ಯು ಭೀಷ್ಮರಂತೆ ಹೋರಾಟ ನಡೆಸಲಿ ಎಂದರು.ಎಂ.ಎಂ. ಭಟ್ ಕಾರೇಕೊಪ್ಪ ಪ್ರತ್ಯೇಕ ಜಿಲ್ಲೆ ಹೋರಾಟ ಯಶಸ್ವಿಯಾಗಬೇಕೆಂದರೆ ಪ್ರತಿ ವ್ಯಕ್ತಿಯೂ ಅಧ್ಯಕ್ಷನಾಗಿ ಹೋರಾಟ ನಡೆಸಬೇಕು ಎಂದರು.ಮುಖಂಡರಾದ ಪರಮಾನಂದ ಹೆಗಡೆ, ಸಿ.ಎಫ್. ನಾಯ್ಕ, ವೀಣಾ ಶೆಟ್ಟಿ, ಶ್ರೀಧರ ಮೊಗೇರ, ರಘು ಕಾನಡೆ, ಶಿವಾಜಿ ಬನವಾಸಿ, ಗಣಪತಿ ಭಟ್ಟ ಕರ್ಜಗಿ, ಮಂಜು ಮೊಗೇರ ಮತ್ತಿತರರು ತಮ್ಮ ಅಭಿಪ್ರಾಯ ಹಂಚಿಕೊಂಡರು.