ಈ ಸಂಚಿಕೆಯು ಅತ್ಯುತ್ತಮವಾದ ಲೇಖನಗಳು, ವರದಿಗಳು, ಪತ್ರಿಕಾ ಪ್ರಕಟಣೆಗಳು, ವಿವಿಧ ಚಟುವಟಿಕೆಗಳ ಛಾಯಾಚಿತ್ರಗಳನ್ನು ಒಳಗೊಂಡಿದ್ದು
ಕನ್ನಡಪ್ರಭ ವಾರ್ತೆ ಮೈಸೂರುಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗವು ಕದಂಬ ಮಾಸ ಸಂಚಿಕೆ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ, ಸಂಚಿಕೆ 26 ರಿಂದ 50ರವರೆಗಿನ ಕದಂಬ ಸುವರ್ಣ ಮಾಲೆ ಸಂಪುಟ-02ನ್ನು ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಕೆ.ಎಂ. ಮಂಟೇಲಿಂಗು ಅವರು ಕಾಲೇಜಿನ ವಾರದ ಸಮಾವೇಶದಲ್ಲಿ ಲೋಕಾರ್ಪಣೆಗೊಳಿಸಿದರು. ನಂತರ ಅವರು ಮಾತನಾಡಿ, ಈ ಸಂಚಿಕೆಯು ಅತ್ಯುತ್ತಮವಾದ ಲೇಖನಗಳು, ವರದಿಗಳು, ಪತ್ರಿಕಾ ಪ್ರಕಟಣೆಗಳು, ವಿವಿಧ ಚಟುವಟಿಕೆಗಳ ಛಾಯಾಚಿತ್ರಗಳನ್ನು ಒಳಗೊಂಡಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾದ ಆದ್ಯತೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಬರೆದಿರುವ ಲೇಖನಗಳಲ್ಲಿ ವಿಮರ್ಶೆ, ವಿಶ್ಲೇಷಣೆಯ ಪ್ರಬುದ್ಧತೆಯು ಎದ್ದು ಕಾಣುತ್ತದೆ. ಮೊದಲ ಬಾರಿಗೆ ಈ ಸಂಪುಟವು ಮಾನ್ಯತೆಯೊಂದಿಗೆ ಪ್ರಕಟವಾಗುತ್ತಿರುವುದು ವಿಶೇಷ. ಜೊತೆಗೆ ಈ ಸಂಚಿಕೆಯು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಕ್ರಿಯಾಶೀಲ ಬರವಣಿಗೆಯ ಆಸಕ್ತಿ ಮತ್ತು ಹವ್ಯಾಸವನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಸಾಮಾನ್ಯ ವಿಷಯ ವಿಜ್ಞಾನ, ಐತಿಹಾಸಿಕ ಅರಿವು ಹಾಗೂ ಸೃಜನಶೀಲ ಬರವಣಿಗೆಯ ಆಸಕ್ತಿ ಮತ್ತು ಕೌಶಲ್ಯವನ್ನು ಮುನ್ನೆಲೆಗೆ ತಂದು ಅದನ್ನು ಅನಾವರಣಗೊಳಿಸುವ ಹಾಗೂ ಪ್ರಕಟಿಸುವ ಇತಿಹಾಸ ವಿಭಾಗದ ಮಾಸಿಕ ಸಂಚಿಕೆಯೇ ಕದಂಬ. ಕಳೆದ 2016 ರಿಂದ ಇಲ್ಲಿಯವರೆಗೂ ಸುಮಾರು 51 ಮಾಸಿಕ ಸಂಚಿಕೆಗಳನ್ನು ಪ್ರಕಟಿಸಲಾಗಿದೆ.ಈ ಕದಂಬ ಸಂಚಿಕೆಯು ಪ್ರತಿ ಶೈಕ್ಷಣಿಕ ಚಾತುರ್ಮಾಸದಲ್ಲಿ ನಡೆಯುವ ವಿಭಾಗದ ಎಲ್ಲ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಗಳು, ಛಾಯಾಚಿತ್ರಗಳು, ಪತ್ರಿಕಾ ಪ್ರಕಟಣೆಗಳನ್ನೊಳಗೊಂಡಂತೆ ವಿವಿಧ ಚಾರಿತ್ರಿಕ ವಿಷಯಗಳನ್ನು ಕುರಿತು ವಿದ್ಯಾರ್ಥಿಗಳು ಬರೆದಿರುವ ಲೇಖನಗಳು, ಪ್ರಬಂಧಗಳು ಮತ್ತು ವರದಿಗಳನ್ನು ಹಾಗೂ ವಿಭಾಗದ ಅಧ್ಯಾಪಕರ ಲೇಖನಗಳು, ಶೈಕ್ಷಣಿಕ ಸಾಧನೆಗಳು, ಪಠ್ಯೇತರ ಚಟುವಟಿಕೆಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಕೊಡುಗೆಯನ್ನು ಸದರಿ ಸಂಚಿಕೆಯು ಒಳಗೊಂಡಿದೆ. ಇಂತಹ ವಿಭಿನ್ನವಾದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ವಿಭಾಗದ ವತಿಯಿಂದ ನಿರಂತರವಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.ವಿದ್ಯಾರ್ಥಿಗಳನ್ನು ಕುರಿತು ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಎಂಬ ಧ್ಯೇಯದೊಂದಿಗೆ ಇತ್ತೀಚಿನ ಯುವ ಪೀಳಿಗೆ ತಮ್ಮ ಬಹುತೇಕ ಸಮಯವನ್ನು ಮೊಬೈಲ್ ಬಳಕೆಯಲ್ಲೇ ಕಳೆಯುತ್ತಿದ್ದು, ಅವಶ್ಯಕತೆಗೆ ತಕ್ಕಂತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸುತ್ತಾ, ತಮ್ಮ ಜೀವನದ ಕಠಿಣ ಪರಿಶ್ರಮದ ಸಂದರ್ಭಗಳನ್ನು ಮೆಲುಕು ಹಾಕುತ್ತಾ ನೀವು ಸಹ ಆತ್ಮವಿಶ್ವಾಸ, ದೃಢ ನಿರ್ಧಾರ ಹಾಗೂ ಸಾಧಿಸುವ ಛಲದ ಮೂಲಕ ಸಾಧನೆಯ ಗುರಿಯನ್ನು ಮುಟ್ಟಬಹುದು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಡೀನ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಎಚ್. ಶ್ರೀಧರ, ವಿಭಾಗದ ಅಧ್ಯಾಪಕರಾದ ಎ.ಆರ್. ನಂದೀಶ್, ಎನ್. ಜಯಲಕ್ಷ್ಮಿ, ಕದಂಬ ಸಂಚಿಕೆಯ ವಿನ್ಯಾಸಕರಾದ ಡಿ. ದಾಸಪ್ರಕಾಶ್ ಹಾಗೂ ಬಿ.ಎ. ವಿದ್ಯಾರ್ಥಿಗಳು ಇದ್ದರು.