7ರಿಂದ ಕಡಬಾಳದ ಕದಂಬೇಶ್ವರ ಅಷ್ಟಬಂಧ ಮಹೋತ್ಸವ

| Published : May 05 2025, 12:45 AM IST

ಸಾರಾಂಶ

ಬನವಾಸಿ ಮಧುಕೇಶ್ವರ ಪ್ರತಿಬಿಂಬದಂತೆ ಇರುವ ಕದಂಬೇಶ್ವರ ವಿಗ್ರಹವು ಜಿಲ್ಲೆಯ ೨ನೇ ಅತಿದೊಡ್ಡ ಶಿವಲಿಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಿರಸಿ; ಕದಂಬರ ಆಳ್ವಿಕೆಯ ವೈಭವಗಳನ್ನು ಸಾರಿ ಹೇಳುವ ಶಿಲಾ ಶಾಸನಗಳು, ಕದಂಬರ ಗತ ಇತಿಹಾಸಕ್ಕೆ ಸಾಕ್ಷಿ ನೀಡುವ ವೀರಗಲ್ಲು, ಹೆಜ್ಜೆ ಹೆಜ್ಜೆಗೂ ನಾಗಬನ ಉಲ್ಲೇಖಿಸುವ ನೂರಾರು ನಾಗ ವಿಗ್ರಹಗಳನ್ನು ಒಳಗೊಂಡ ತಾಲೂಕಿನ ಕಡಬಾಳದ ಕದಂಬೇಶ್ವರ ಅಷ್ಟಬಂಧ ಮಹೋತ್ಸವ, ದೇವಾಲಯ ಸಮರ್ಪಣೆ ಕಾರ್ಯಕ್ರಮ ಮೇ ೭ರಿಂದ ೧೦ರವರೆಗೆ ನೆಡೆಯಲಿದೆ.

ಈ ಕುರಿತು ಕಡಬಾಳದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಗ್ರಾಮಸ್ಥರು, ಬನವಾಸಿ ಮಧುಕೇಶ್ವರ ಪ್ರತಿಬಿಂಬದಂತೆ ಇರುವ ಕದಂಬೇಶ್ವರ ವಿಗ್ರಹವು ಜಿಲ್ಲೆಯ ೨ನೇ ಅತಿದೊಡ್ಡ ಶಿವಲಿಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು ೧೪೦೦ ವರ್ಷಗಳ ಹಿಂದೆ ಹಾನಗಲ್ ಕದಂಬರ ಆಳ್ವಿಕೆಯ ಕಾಲದಲ್ಲಿ ಕದಂಬೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಇತಿಹಾಸಕಾರರಿಂದ ಉಲ್ಲೇಖಿತಗೊಂಡಿದೆ. ಕದಂಬರ ಆಳ್ವಿಕೆಯ ಬಹುಮುಖ್ಯ ನೆಲೆಯಾಗಿದ್ದ ಶಿಲಾಶಾಸನಗಳ ಕುರುಹು, ಕೋಟೆಯ ಭಗ್ನಾವಶೇಷ, ಜೈನ ಪರಂಪರೆಯ ವೈಶಿಷ್ಟ್ಯತೆಗಳನ್ನು ತಿಳಿಸುವ ಕೆಲ ಶಿಲಾಶಾಸನಗಳನ್ನು ಇಲ್ಲಿ ಕಾಣಬಹುದಾಗಿದೆ. ಅಂದಾಜು ₹೧ ಕೋಟಿಗೂ ಅಧಿಕ ವೆಚ್ಚದಲ್ಲಿ ಆಗಮಶಾಸ್ತ್ರದ ಪ್ರಕಾರ ನಿರ್ಮಿಸಲಾದ ನೂತನ ದೇವಾಲಯವು ಗರ್ಭಗುಡಿ, ನೈವೇದ್ಯ ಮಂಟಪ, ಸಂಧ್ಯಾ ಮಂಟಪ, ಘಂಟೆ ಮಂಟಪ, ಪ್ರದಕ್ಷಿಣಾಪಥ, ಭೋಜನಶಾಲೆ, ಯಾಗಶಾಲೆ, ಧ್ವಜಸ್ಥಂಭ, ಕಲ್ಯಾಣಿ, ಕ್ಷೇತ್ರಪಾಲ ಇವುಗಳನ್ನು ಒಳಗೊಂಡಿದೆ. ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಅಷ್ಟಬಂಧ ಮಹೋತ್ಸವದಲ್ಲಿ ಅಂದಾಜು ೫ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮೋದ ಹೆಗಡೆ, ಗುರುದಾಸ ಹೆಗಡೆ, ಶಿವಾನಂದ ನಾಯ್ಕ, ಸತೀಷ ನಾಯ್ಕ, ಪ್ರಸಾದ ಹೆಗಡೆ, ಅನಂತ ಆಚಾರಿ, ವಿದ್ಯಾಧರ ಹೆಗಡೆ, ವಿಘ್ನೇಶ್ವರ ನಾಯ್ಕ, ದತ್ತಗುರು ಹೆಗಡೆ, ಸುರೇಶ ಹೆಗಡೆ ಉಪಸ್ಥಿತರಿದ್ದರು.

ಕ್ಷೇತ್ರದ ವಿಶೇಷತೆ:

* ಕದಂಬರ ಆಳ್ವಿಕೆಯ ಕೋಟೆ ಕುರುಹುಗಳು

* ನಾಗಬನ

* 15ಕ್ಕೂ ಅಧಿಕ ಶಿಲಾಶಾಸನಗಳು

* ಜಿಲ್ಲೆಯ ಎರಡನೇ ಅತಿದೊಡ್ಡ ಶಿವಲಿಂಗ

* ಪುರುಷ ಪ್ರಮಾಣದ ೫.೫ ಅಡಿ ಎತ್ತರದ ಶಿವಲಿಂಗ

* ಝರಿನೀರಿನ ಕಲ್ಯಾಣಿ