ಗಣೇಶ ಚತುರ್ಥಿಗೆ ಕದಂಬನಗರ ಸಜ್ಜು: ಭರ್ಜರಿ ಸಿದ್ಧತೆ

| Published : Aug 26 2025, 01:05 AM IST

ಸಾರಾಂಶ

ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಬೆಳೆಯೂ ಭರ್ಜರಿಯಾಗಿದೆ.

ಶಿರಸಿ: ಗಣಪತಿಯ ಸ್ವಾಗತಕ್ಕೆ ಕದಂಬ ನಗರ ಸಜ್ಜಾಗಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಹಾಗೂ ಮನೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವವರು ಸಡಗರದಿಂದ ಬುಧವಾರದ ಗಣೇಶ ಚೌತಿಗೆ ಕಾಯುತ್ತಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಬೆಳೆಯೂ ಭರ್ಜರಿಯಾಗಿದೆ. ಅದ್ಧೂರಿಯಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ನಗರದಲ್ಲಿ ೧೫ ಸಾರ್ವಜನಿಕ ಗಣಪತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಪೆಂಡಾಲ್ ಹಾಕುವ ಕಾರ್ಯ ಮುಕ್ತಾಯದ ಹಂತ ತಲುಪಿದೆ.

ಪ್ರಸಿದ್ಧ ವೀರಾಂಜನೆಯ ದೇವಸ್ಥಾನದ ಬನವಾಸಿ ಕಾ ರಾಜಾ, ಜನತಾ ಕಾಲೋನಿಯ ಹಿಂದೂ ಮಹಾಗಣಪತಿ, ಕದಂಬ ವೃತ್ತ, ಅಯ್ಯಪ್ಪ ನಗರ, ಯುವಕ ಮಂಡಳಿ, ದೊಡ್ಡಕೇರಿ, ಉಪ್ಪಾರ ಕೇರಿಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯ ಪೆಂಡಾಲ್‌ಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ೫ ದಿನ, ೭ ದಿನ, ೯ ದಿನ ಹಾಗೂ ೧೧ ದಿನಗಳವರೆಗೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಿವೆ. ೪ ಅಡಿಯಿಂದ ೧೫ ಅಡಿಗಳವರೆಗೆ ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಈ ಬಾರಿ ಕಣ್ಮನ ಸೆಳೆಯಲಿವೆ. ಸ್ಥಳೀಯ ಕಲಾವಿದರಲ್ಲದೇ ದಾವಣಗೆರೆ, ಶಿರಸಿ, ಮತ್ತಿತರ ಕಡೆಗಳಿಂದ ಆಕರ್ಷಕ ಗಣೇಶ ಮೂರ್ತಿಗಳನ್ನು ತರಿಸಲಾಗುತ್ತಿದೆ. ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಬೆಳಿಗ್ಗೆಯೇ ಗುಡಿಗಾರರ, ಕಲಾವಿದರ ಮನೆಗೆ ತೆರಳಿ ಗಣಪತಿಗಳನ್ನು ತರಲಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮಧ್ಯಾಹ್ನದ ಬಳಿಕ ಅಲಂಕೃತ ವಾಹನದೊಂದಿಗೆ ತೆರಳಿ ಗಣಪತಿಗಳನ್ನು ತರಲಿದ್ದಾರೆ.

ಸಾರ್ವಜನಿಕ ಗಣೇಶೋತ್ಸವಗಳ ಪ್ರತಿಷ್ಠಾಪನೆಗೆ ಅಗತ್ಯವಾದ ಗ್ರಾಪಂ, ಅಗ್ನಿಶಾಮಕ ದಳ, ಹೆಸ್ಕಾಂ, ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಂಡಿದ್ದು, ಶಾಂತಿಯುತವಾಗಿ ಗಣೇಶೋತ್ಸವ ನಡೆಸುವಂತೆ ಸೂಚಿಸಲಾಗಿದೆ.

ಖರೀದಿ ಭರಾಟೆ:

ಗಣೇಶ ಚತುರ್ಥಿ ಮುನ್ನಾದಿನವೇ ವಾರದ ಸಂತೆ ನಡೆಯುತ್ತಿದೆ. ಪಟ್ಟಣದಲ್ಲಿ ಹಬ್ಬದ ಖರೀದಿ ಜೋರಾಗಿ ಕಂಡು ಬಂತು. ಗಣೇಶ ಮೂರ್ತಿಗೆ ಅಲಂಕಾರ ಮಾಡುವ ನೂರಾರು ಬಗೆಯ ವಸ್ತುಗಳ, ಆಲಂಕಾರಿಕ ಆಭರಣಗಳ, ತಲೆಪಟ್ಟಿಗಳ ಬಿರುಸಿನ ಮಾರಾಟ ಕಂಡು ಬಂತು. ವಿವಿಧ ಬಗೆಯ ಹೂವುಗಳ, ಹಣ್ಣುಗಳ ಮಾರಾಟ, ಖರೀದಿ ಜೋರಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಗಣೇಶನ ಅದ್ಧೂರಿ ಆಗಮನಕ್ಕಾಗಿ ಭಕ್ತರು ಸಜ್ಜಾಗಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಗಣೇಶೋತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿಯ ನಮ್ಮ ಹಿಂದೂ ಮಹಾ ಗಣಪತಿಯ ವಿಗ್ರಹವು ದಾವಣಗೆರೆಯಿಂದ ಆಗಮಿಸಲಿದೆ. ಗಣೇಶನ ಆಗಮನಕ್ಕಾಗಿ ಯುವಕರು ಕಾತರದಿಂದ ಕಾಯುತ್ತಿದ್ದಾರೆ.-ವಸಂತ ಜೋಗಿ, ಬನವಾಸಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ