Kadechur: Chemicals caused worker's death!?

-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮತ್ತೊಂದು ಅವಘಡ । ತೆಲಂಗಾಣದ ಕುಣಸಿ ಗ್ರಾಮದ ತ್ರಿವಿಕ್ರಮ ಸಾವು

--

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮತ್ತೊಂದು ಅವಘಡ ಸಂಭವಿಸಿತೇ ? ಅಪಾಯಕಾರಿ ರಾಸಾಯನಿಕ-ವಿಷಗಾಳಿ ಸೋರಿಕೆಯಿಂದ ಅಸ್ವಸ್ಥಗೊಂಡಿದ್ದ ಅಲ್ಲಿನ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಉಸಿರಾಟ ತೊಂದರೆಯಿಂದ ಮೃತಪಟ್ಟನೇ !? ಸದ್ಯ, ಈ ಪ್ರಕರಣವನ್ನು ಕಂಪನಿಯ ಮುಖ್ಯಸ್ಥರು ಮರೆಮಾಚುವ ಪ್ರಯತ್ನ ನಡೆಸಿದ್ದಾರೆಯೇ ?

ಮಂಗಳವಾರ, ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಸಮೀಪದ, ತೆಲಂಗಾಣ ರಾಜ್ಯದ ವ್ಯಾಪ್ತಿಗೆ ಬರುವ ಕುಣಸಗಿ ಗ್ರಾಮದ 30 ವರ್ಷದ ತ್ರಿವಿಕ್ರಮನ ಸಾವು ಪ್ರಕರಣ ಅಲ್ಲೀಗ ಮೇಲಿನಂತಹ ಪ್ರಶ್ನೆಗಳಿಗೆ ಕಾರಣವಾಗಿದೆ. ಉಸಿರಾಟ ತೊಂದರೆಯಿಂದ ಮೃತಪಟ್ಟ ತ್ರಿವಿಕ್ರಮ ಪ್ರಕರಣ ಇದೀಗ ಆತಂಕ ಮೂಡಿಸಿದೆ. ಕೈಗಾರಿಕಾ ಪ್ರದೇಶದ ರಾಸಾಯನಿಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಗಡಿಭಾಗದ ಕುಣಸಿ ಗ್ರಾಮದ ಬಡಕುಟುಂಬದ ತ್ರಿವಿಕ್ರಮ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾನೆ.

ಕಂಪನಿಯಲ್ಲಿ ಕೆಲಸ ಮಾಡಿ ಮನೆಗೆ ಹಿಂತಿರುಗಿದ್ದ ಕಾರ್ಮಿಕ ತ್ರಿವಿಕ್ರಮ, ರಾತ್ರಿ ಉಸಿರಾಟದ ತೊಂದರೆ ಇದೆ ಎಂದು ಕುಟುಂಬದವರಿಗೆ ತಿಳಿಸಿದ್ದ. ಅ.6 ರಂದು ಬೆಳಗಿನ ಜಾವ ಉಸಿರಾಟದ ತೊಂದರೆ ಹೆಚ್ಚಾಗಿದ್ದು, ರಾಯಚೂರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಪ್ರಾಣಬಿಟ್ಟಿದ್ದಾನೆ. ಅಂಗವಿಕಲ ತಂದೆ, ತಾಯಿ ಹಾಗೂ ವಿದ್ಯಾಭ್ಯಾಸ ಮಾಡುತ್ತಿರುವ ತಮ್ಮನಿಗೆ ಆಧಾರವಾಗಿದ್ದ ತ್ರಿವಿಕ್ರಮನ ಸಾವು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಎರಡು ತಿಂಗಳುಗಳ ಹಿಂದೆ ವಿಷಾನಿಲ ಸೋರಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು.

ತ್ರಿವಿಕ್ರಮನ ಸಾವಿಗೂ ಇಂತಹುದ್ದೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೈಗಾರಿಕಾ ಪ್ರದೇಶದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಮತ್ತು ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡದ ಕಂಪನಿಗಳಿಗೆ ಬೀಗ ಜಡಿಯಲು ಸರ್ಕಾರ ವರ್ಷಗಳಿಂದ ಮೀನಾಮೇಷ ಎಣಿಸುತ್ತಿದ್ದರೆ, ವಿವಿಧ ಮಾರಣಾಂತಿಕ ಕಾಯಿಲೆಗಳ ತಗುಲಿ ಒಬ್ಬೊಬ್ಬರಾಗಿ ಸದ್ದಿಲ್ಲದೆ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಸಾವು ಹೆಚ್ಚುತ್ತಿರುವ ಆತಂಕ ಮೂಡಿಸಿದೆ. ಕಾರ್ಮಿಕ ತ್ರಿವಿಕ್ರಮನ ಸಾವಿನ ಕುರಿತು ಇದೀಗ ಹಲವು ಗೊಂದಲಕಾರಿ ಮಾತುಗಳು ಕೇಳಿಬರುತ್ತಿವೆ. ಕಂಪನಿಯ ಕೆಲವರಿಂದ ಸಾವಿನ ನಿಜವಾದ ಕಾರಣವನ್ನು ಮರೆಮಾಚುವ ಅಥವಾ ಬೇರೆ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಫಾರ್ಮಾ ಕಂಪನಿಯ ಮುಖ್ಯಸ್ಥರು ಮೃತ ಯುವಕನ ಕುಟುಂಬಸ್ಥರ ಭೇಟಿಯಾಗಿದ್ದು, ಕಂಪನಿ ವಿರುದ್ಧ ದೂರು ನೀಡದಂತೆ ಮನವೊಲೈಸುವ ಪ್ರಯತ್ನ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಕ್ರಮ ಮೃತಪಟ್ಟಿದ್ದಾನೆ ಎಂದು ಹೊರಜಗತ್ತಿಗೆ ತಿಳಿಸುವಂತೆ ಒತ್ತಡ ಹೇರಲಾಗುತ್ತಿದೆ ಎ ಹೀಗಾಗಿ ಎಂದು ಕುಟುಂಬವನ್ನು ಒಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಹಿಂದೆಯೂ ಕೂಡ, ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಂಪನಿಗಳಲ್ಲಿ ಕಾರ್ಮಿಕರ ಸಾವು-ನೋವು ಪ್ರಕರಣಗಳನ್ನು ಮುಚ್ಚಿ ಹಾಕಿ, ಹೃದಯಾಘಾತ ಅಥವಾ ಅನಾರೋಗ್ಯದಿಂದಾದ ಸಾವುಗಳು ಎಂದು ಬಿಂಬಿಸಲಾಗುತ್ತಿದೆ ಎಂಬ ದೂರುಗಳಿವೆ. ಕೆಲವು ಕಂಪನಿಗಳ ಬಂದ್ ಮಾಡುವಂತೆ ವರ್ಷದ ಹಿಂದೆ ಪರಿಸರ ಇಲಾಖೆಯೇ ಶಿಫಾರಸ್ಸು ಮಾಡಿದ್ದರೂ ಕೂಡ, ಕ್ರಮ ಕೈಗೊಳ್ಳಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಷದಿಂದ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವಂತಿದೆ ಅಂತಾರೆ ಇಲ್ಲಿನ ಜನ.

.....ಬಾಕ್ಸ್‌ ....

ಕಾರ್ಮಿಕ ಸಾವು: ಮರಣೋತ್ತರ ಪರೀಕ್ಷೆಗೆ ಆಗ್ರಹ

ಕಡೇಚೂರು ಬಾಡಿಯಾಳ ಕೈಗಾರಿಕಾ ವಸಾಹತು ವ್ಯಾಪ್ತಿಯ ಮದರ್ ಅರ್ಥ ಪ್ರೈವೇಟ್ ಲಿ., ಘನತ್ಯಾಜ್ಯ ವಿಲೇವಾರಿ ಕಂಪನಿಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಓಡಿಸ್ಸಾ ಮೂಲದ ಕಾರ್ಮಿಕ ದೀಪಕ ತಾಪಾ ಅನುಮಾನಾಸ್ಪದ ಸಾವಿನ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ, ರಾಸಾಯನಿಕ ತಗುಲಿ ಮೃತಪಟ್ಟಿದ್ದನ್ನೆನ್ನಲಾದ ದೀಪಕ್‌ ಶವದ ಮರಣೋತ್ತರ ಪರೀಕ್ಷೆ ನಡೆಸದೆ, ಯಾದಗಿರಿ ಭೀಮಾನದಿ ಬಳಿಯ ರುದ್ರಭೂಮಿಯಲ್ಲಿ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಹೃದಯಾಘಾತದ ಸಾವು ಎಂದು ಬಿಂಬಿಸಿದ್ದು, ಕೂಡಲೇ ಈ ಕಾರ್ಮಿಕನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಸತ್ಯ ಹೊರತರಬೇಕೆಂದು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

--

6ವೈಡಿಆರ್11 : ಮೃತ ಕಾರ್ಮಿಕ ತ್ರಿವಿಕ್ರಮ

6ವೈಡಿಆರ್12 : ಕಡೇಚೂರು ಬದುಕು ಚೂರು, ಚೂರು.. (ಲೋಗೋ)

6ವೈಡಿಆರ್13 : ಕನ್ನಡಪ್ರಭ ಸರಣಿ ವರದಿಗಳ ನೋಟ