ಸಾರಾಂಶ
ಕೊರಟಗೆರೆ: ಭಾರತ ದೇಶದ ಕಟ್ಟಕಡೆಯ ಹಳ್ಳಿಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿದಿನ ಬೊಬ್ಬೆಯಿಡುತ್ತಿವೆ, ಆದರೆ ತಾಲೂಕಿನಲ್ಲೊಂದು ಗ್ರಾಮದಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗಿರುವುದು ದುರುದೃಷ್ಟಕರ ಸಂಗತಿಯಾಗಿದೆ.ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಕಾದಿಲಾಪುರ ಹಾಗೂ ದಿನ್ನೆಪಾಳ್ಯ ಗ್ರಾಮದಲ್ಲಿ ೩೦೦ ಕ್ಕೂ ಹೆಚ್ಚು ಮನೆಗಳು ಹೊಂದಿದ್ದು, ೨೦೦೦ ಕ್ಕೂ ಹೆಚ್ಚು ಜನರು ಈ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಸಹ ಕಾದಿಲಾಪುರ ಗ್ರಾಮದಲ್ಲಿ ಮಾತ್ರ ಯಾವುದೇ ಅನುದಾನವನ್ನ ಅಧಿಕಾರಿಗಳು ಬಳಕೆ ಮಾಡದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾದಂತಾಗಿದೆ. ಕಾದಿಲಾಪುರ ಗ್ರಾಮದಲ್ಲಿ ಸಾಕಷ್ಟು ವರ್ಷಗಳಿಂದ ರಸ್ತೆ ಇಲ್ಲ, ಚರಂಡಿ ಇಲ್ಲದೆ ಇಲ್ಲಿನ ಜನರು ಪ್ರತಿನಿತ್ಯ ಒಂದಲ್ಲೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದರೆ ಸಾಕು ಮನೆಗಳ ಮುಂದೆ ನೀರು ನಿಂತು ಸೊಳ್ಳೆಗಳ ಕಾಟ ಆಗಿ ನಾನಾ ಕಾಯಿಲೆಗಳು ಬಂದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಬೇಸತ್ತ ಕಾದಿಲಾಪುರ ಗ್ರಾಮದ ಯುವಕರು ತುಂಬಿದ ಚರಂಡಿಯನ್ನ ಸ್ವಚ್ಛಗೊಳಿಸಲು ಮುಂದಾಗಿರುವುದು ಆಡಳಿತ ವ್ಯವಸ್ಥೆ ಅವ್ಯವಸ್ಥೆ ಆಗಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನರೇಗಾ ಯೋಜನೆಯ ಕಾಮಗಾರಿ ಕಾಣದ ಗ್ರಾಮಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಾತ್ಮ ಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಚರಂಡಿ, ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳು ಪ್ರಾರಂಭದಲ್ಲಿ ಇದ್ದರೂ ಸಹ ಈ ಗ್ರಾಮಗಳಲ್ಲಿ ಯಾವುದೇ ಕಾಮಗಾರಿಗಳು ಮಾಡದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ವಿಪರ್ಯಾಸ.ನಾನು ಕಾದಿಲಾಪುರ ಗ್ರಾಮಕ್ಕೆ ಮದುವೆ ಆಗಿ ಬಂದು ೧೮ ವರ್ಷ ಆಗಿದು, ಅಲ್ಲಿಂದ ಇಲ್ಲಿಯವರೆಗೂ ಒಂದು ಚರಂಡಿ ಇಲ್ಲ, ರಸ್ತೆ ಇಲ್ಲ, ಕೇಳಿದರೆ ದೂರು ಕೊಡಿ ಎಂದು ಹೇಳುತ್ತಾರೆ. ನಮ್ಮ ಹಕ್ಕು ಕೇಳಿದರೆ ಜಗಳಕ್ಕೆ ಬರ್ತಾರೆ, ಗ್ರಾಮದೊಳಗೆ ಹೋಗಿರುವ ರಾಜಕಾಲುವೆ ಮುಚ್ಚಿದಾರೆ. ಅನೇಕ ಬಾರಿ ಲಿಖಿತ ಮೂಲಕ ಗ್ರಾಪಂಗೆ ಅರ್ಜಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.- ಗೀತಾ, ಕಾದಿಲಾಪುರ ಗ್ರಾಮಸ್ಥೆ
ಸತತ ಮಳೆಯಿಂದಾಗಿ ಕಾದಿಲಾಪುರ ಕದರಯ್ಯನಪಾಳ್ಯ, ದಿನ್ನೆಪಾಳ್ಯ ಮೂರು ಗ್ರಾಮಗಳಲ್ಲಿ ವಿದ್ಯುತ್ ಬಲ್ಪ್ ಹೋಗಿದ್ದು, ಪಿಡಿಒ ಗಮನಕ್ಕೆ ತರಲಾಗಿದೆ. ಚರಂಡಿ ಸ್ವಚ್ಛತೆಗಾಗಿ ಹಣ ಮೀಸಲಿಟ್ಟಿದ್ದು, ಬಲ್ಪ್ ಹಾಗೂ ಚರಂಡಿಗಳನ್ನ ಸ್ವಚ್ಛತೆ ಮಾಡಲು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ನರೇಗಾ ಯೋಜನೆಯಲ್ಲಿ ಅದಷ್ಟು ಬೇಗ ಚರಂಡಿ ಹಾಗೂ ರಸ್ತೆ ಕಾಮಗಾರಿಗಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ.- ಬಸವರಾಜು ಗ್ರಾಪಂ ಸದಸ್ಯ.
ಈಗಾಗಲೇ ನಮ್ಮ ಸಿಬ್ಬಂದಿಗಳನ್ನ ಚರಂಡಿಗಳನ್ನ ಸ್ವಚ್ಛಗೊಳಿಸಲು ಕಳಿಸಲಾಗಿದ್ದು, ಅಲ್ಲಿನ ಸ್ಥಳೀಯರು ಗಲಾಟೆ ಮಾಡಿ ಉದ್ದೇಶ ಪೂರಕವಾಗಿ ಸಮಸ್ಯೆ ಮಾಡುತ್ತಿದ್ದಾರೆ. ಎಸ್‌ಸಿಪಿ ಟಿಎಸ್ ಪಿ ಅನುದಾನದಲ್ಲಿ ಚರಂಡಿ ಹಾಗೂ ರಸ್ತೆ ಕಾಮಗಾರಿ ಮಾಡಲಾಗುವುದು. ನಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು.- ರವಿಕುಮಾರ್ ಪಿಡಿಒ ಅಕ್ಕಿರಾಂಪುರ.