ಕನ್ನಡಪ್ರಭ ವಾರ್ತೆ ಆನಂದಪುರ

ಇತಿಹಾಸ ಪ್ರಸಿದ್ಧವಾದ ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬಾದೇವಿ ಜಾತ್ರೆ ಮಾ.10ರ ಮಂಗಳವಾರದಿಂದ 7 ದಿನಗಳ ಕಾಲ ಬಾರಿ ವೈಭವದಿಂದ ಜರುಗಲಿದೆ.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ 35 ಗ್ರಾಮಗಳ ಗ್ರಾಮ ದೇವತೆಯಾಗಿದ್ದು ಗ್ರಾಮದೆಲ್ಲೆಡೆ ಸಂಭ್ರಮದಿಂದ ಜಾತ್ರೆಗೆ ಸಜ್ಜುಗೊಂಡಿದೆ.

ಮಂಗಳವಾರ ರಾತ್ರಿ ಗೋಧೋಳಿ ಲಗ್ನದಲ್ಲಿ ತಾಯಿ ಮಾರಿಕಾಂಬೆಯನ್ನು ತವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಿಂದಿನ ಸಂಪ್ರದಾಯದಂತೆ ಯಡೇಹಳ್ಳಿಯ ಮಲವಕೊಪ್ಪದ ಮನೆತನದ ಕುಟುಂಬದವರು ತಾಯಿಯ ತವರು ಮನೆಯವರಾಗಿದ್ದು, ತಾಯಿಯ ಆಭರಣಗಳನ್ನು ಮಂಗಳ ವಾದ್ಯದೊಂದಿಗೆ ತಂದು ದೇವಿಗೆ ಅರ್ಪಿಸುತ್ತಾರೆ. ಹಾಗೆ ಮಲಂದೂರು ಪಟೇಲ್ ಮನೆತನದ ಕುಟುಂಬದವರು ದೇವಿಯ ಗಂಡನ ಮನೆಯವರಾಗಿದ್ದು, ಇವರನ್ನು ಮಂಗಳವಾದ್ಯದೊಂದಿಗೆ ತವರು ಮನೆಗೆ ಕರೆತಂದ ನಂತರ ಸಂಪ್ರದಾಯದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ. ಮಾರಿಕಾಂಬೆಯ ತವರು ಮನೆಯಲ್ಲಿ ಮೊದಲು ಬ್ರಾಹ್ಮಣರು ವಿವಿಧ ಸಂಪ್ರದಾಯದಂತೆ ಮಾರಿಕಾಂಬಾ ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ದೇವಿಗೆ ಮಾಂಗಲ್ಯ ಧಾರಣೆಯಾಗಲಿದೆ. ಎಲ್ಲಾ ಪೂಜಾ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ನಡೆಯಲಿವೆ. ಪಟ್ಟಣದವರು, ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಮಾರಿಕಾಂಬ ದೇವಿಗೆ ಉಡಿ ತುಂಬುವ ಶಾಸ್ತ್ರದೊಂದಿಗೆ ತಾಯಿಯ ದರ್ಶನವನ್ನು ಪಡೆಯಲಿದ್ದಾರೆ. ರಾತ್ರಿ 12 ಗಂಟೆಯವರೆಗೂ ಮಾರಿಕಾಂಬ ದೇವಿಯ ತವರು ಮನೆಯಲ್ಲಿ ಪೂಜೆ ನಡೆಯಲಿದೆ. ನಂತರ ಮರಿಕಾಂಬ ದೇವಿಯನ್ನು ಗಂಡನ ಮನೆಗೆ ಕರೆದೊಯ್ಯುವ ಶಾಸ್ತ್ರ ನಡೆಯಲಿದೆ. ಈ ಸಂದರ್ಭದಲ್ಲಿ ಅಸಾದಿ ಜನಾಂಗದವರು ಮಾರಿಕಾಂಬಾ ದೇವಿ ಮನೆಯಿಂದ ಗಂಡನ ಮನೆಗೆ ತೆರಳುವಂತೆ ಹೊಗಳಿಕೆ ಹಾಕುತ್ತಾರೆ. ನಂತರ ದೇವಿ ರಥವೇರಿ ವಿವಿಧ ಜಾನಪದ ಕಲಾತಂಡದೊಂದಿಗೆ ಮೆರವಣಿಗೆಯ ಮೂಲಕ ಗಂಡನ ಮನೆಗೆ ಕರೆದೊಯ್ಯಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ದೇವಿಯ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಬೆಳಗಿನ ಜಾವ ಸೂರ್ಯೋದಯದ ಮೊದಲು ಮಾರಿಕಾಂಬ ದೇವಿಗೆ ಗಂಡನ ಮನೆಯ ಗದ್ದಿಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

7 ದಿನಗಳ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಾ.14 ಮತ್ತು 15 ರಂದು ಎರಡು ದಿನಗಳ ಕಾಲ ಪಟ್ಟಣದ ಕೆಪಿಎಸ್ ಶಾಲೆ ಮುಂಭಾಗದ ಮೈದಾನದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.


7 ದಿನಗಳ ಕಾಲ ನಡೆಯುವ ಮಾರಿಕಾಂಬಾದೇವಿ ಜಾತ್ರೆಗೆ ತವರು ಮನೆಯಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ಗಂಡನ ಮನೆಯ ದೇವಸ್ಥಾನದ ಮುಂಭಾಗ ನಿರ್ಮಾಣಗೊಂಡ ಸುಂದರವಾದ ಮಂಟಪಕ್ಕೆ ಹಾಗೂ ಗೋಪುರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಆಕರ್ಷಣೆಯ ದೀಪಾಲಂಕಾರವನ್ನು ಅಳವಡಿಸಿದ್ದು, ಇದರಿಂದ ಇಡೀ ಆನಂದಪುರ ಪಟ್ಟಣವೇ ದೀಪಾಲಂಕಾರದಿಂದ ಜಗಜಗಿಸುತ್ತಿದೆ. 7 ದಿನಗಳ ಕಾಲ ನಡೆಯುವ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆ ಈಗಾಗಲೇ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳ ಗುರುತಿಸಿದೆ. ಮಾ 16ರಂದು ಮಾರಿಕಾಂಬಾ ದೇವಿಯನ್ನು ವನಕ್ಕೆ ಕಳಿಸಲಾಗುತ್ತದೆ.