Kadri Kambala Junction Road concrete foundation stone laid at a cost of Rs. 1 crore
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33 ನೇ ಕದ್ರಿ ದಕ್ಷಿಣ ವಾರ್ಡಿನ ಮೈದಾನದಿಂದ ಕದ್ರಿ ಕಂಬಳ ಜಂಕ್ಷನ್ ವರೆಗಿನ ರಸ್ತೆಯು ಸುಮಾರು 1 ಕೋಟಿ ರು. ಅನುದಾನದಲ್ಲಿ ಕಾಂಕ್ರಿಟೀಕರಣಗೊಳ್ಳಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ನಂತರ ಮಾತನಾಡಿದ ಶಾಸಕರು, ಇದು ಹಲವು ಸಮಯದ ಬೇಡಿಕೆಯಾಗಿದ್ದು ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಇಡೀ ರಸ್ತೆ ಹಾಳಾಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯಲ್ಲಿ ಈ ಕಾಮಗಾರಿಗೆ ವಿಶೇಷ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಈ ಭಾಗದ ನಿಕಟಪೂರ್ವ ಮನಪಾ ಸದಸ್ಯರುಗಳಾದ ಮನೋಹರ್ ಕದ್ರಿ ಹಾಗೂ ಶಕೀಲಾ ಕಾವ ರವರ ವಿಶೇಷ ಒತ್ತಾಯದ ಮೇರೆಗೆ ಮರು ಚಾಲನೆ ದೊರೆತಿರುವುದು ಸಂತಸ ತಂದಿದೆ ಎಂದರು.ಮುಂದಿನ ದಿನಗಳಲ್ಲಿ ಇಲ್ಲಿನ ರಸ್ತೆಗೆ ಅತ್ಯುತ್ತಮ ಬೀದಿದೀಪಗಳೂ ಬರಲಿದ್ದು ಆ ಪ್ರಕ್ರಿಯೆಗಳೂ ಸಹ ಚಾಲನೆಯಲ್ಲಿವೆ. ಈ ಪ್ರದೇಶವು ಹಲವು ಹೋಟೆಲ್, ವೈದ್ಯಕೀಯ, ವಸತಿ ಸಮುಚ್ಚಯ, ಸೇರಿದಂತೆ ಜನನಿಬಿಡವಾಗಿದ್ದು ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಂತೆ ಸಂಬಂಧ ಪಟ್ಟವರಿಗೆ ಸೂಚನೆ ನೀಡಿದ್ದೇನೆ. ಅದರ ಜೊತೆಯಲ್ಲಿ ಸಾರ್ವಜನಿಕರೂ ಸಹ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಪಾಲಿಕೆ ಮಾಜಿ ಸದಸ್ಯ ಸಂದೀಪ್ ಗರೋಡಿ, ಬಿಜೆಪಿ ಪ್ರಮುಖರಾದ ಫೆಡ್ರಿಕ್, ಪಮ್ಮಿ ಕೊಡಿಯಾಲ್ ಬೈಲ್, ವೆಂಕಟೇಶ್, ವೇಣುಗೋಪಾಲ್ ಶೆಟ್ಟಿ, ಹೇಮಾನಂದ್, ಯಶವಂತ್, ತಾರನಾಥ್ ಮತ್ತಿತರರಿದ್ದರು.