ಸಾರಾಂಶ
6ನೇ ಬಾರಿ ಆಯವ್ಯಯ ಓದಿದ 4ನೇ ಬಾರಿಯ ಅಧ್ಯಕ್ಷ ಭಂಡಾರಿ । ಪುರಸಭೆ ಪ್ರವೇಶದ್ವಾರದಿಂದ ಸೂಟ್‌ಕೇಸ್ ಜೊತೆ ಆಗಮನ
ಕನ್ನಡ ಪ್ರಭ ವಾರ್ತೆ ಕಡೂರುಪುರಸಭೆಯ 2025-26ನೇ ಸಾಲಿನ ಆಯವ್ಯಯವನ್ನು ವಿಭಿನ್ನ ರೀತಿಯಲ್ಲಿ 4ನೇ ಬಾರಿಗೆ ಪುರಸಭೆ ಅಧ್ಯಕ್ಷರಾಗಿರುವ ಭಂಡಾರಿ ಶ್ರೀನಿವಾಸ್ 6ನೇ ಬಾರಿ ಮಂಡಿಸಿದರು.
ನಗರದಲ್ಲಿ ಬುಧವಾರ ಪಟ್ಟಣದ ಪುರಸಭೆಯ ಪ್ರವೇಶದ್ವಾರದಿಂದ ಪುರಸಭೆ ಬಜೆಟ್ ಮಂಡನೆಗಾಗಿ ಪುರಸಭೆಯ ಉಪಾಧ್ಯಕ್ಷರು ಮತ್ತು ಸಹ ಸದಸ್ಯರೊಂದಿಗೆ ಬಜೆಟ್ ಮಂಡನೆಯ ಸೂಟ್‌ಕೇಸ್‌ನೊಂದಿಗೆ ಕನಕ ಸಭಾಂಗಣಕ್ಕೆ ಆಗಮಿಸುವ ಮೂಲಕ ಬಜೆಟ್ ಮಂಡನೆ ಮಾಡಲಾಯಿತು.ಸಭಾಂಗಣದಲ್ಲಿ ಪುರಸಭೆ ಉಪಾಧ್ಯಕ್ಷ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ ಎಸ್ ಮಂಜುನಾಥ್,ಪುರಸಭೆ ಸದಸ್ಯರು ಮತ್ತು ಅಧಿಕಾರಿ ವರ್ಗಗಳ ಸಮ್ಮುಖದಲ್ಲಿ ಮಂಡನೆ ಮಾಡಿ ಮಾತನಾಡಿದರು. ಕಡೂರು ಪುರಸಭೆಯ 2025- 26ನೇ ಸಾಲಿನ ಆಯವ್ಯಯ ಪಟ್ಟಿಯ ಸಾರಾಂಶವನ್ನು ಸಭೆಗೆ ಪ್ರಕಟಿಸಿದರು. ಎಲ್ಲ ಮೂಲಗಳಿಂದ ಪುರಸಭೆಯಲ್ಲಿ 31, 93, 933 ರು. ನಿರೀಕ್ಷಿತ ಉಳಿತಾಯ ಹೊಂದುತ್ತದೆ ಎಂದು ಘೋಷಿಸಿದರು.
ಈ ಬಾರಿಯ ಬಜೆಟ್ ಮಂಡನೆಯ ಆರಂಭಿಕ ಮೊತ್ತ 66,77,556 ರು., ರಾಜಸ್ವ ಖಾತೆಯಲ್ಲಿನ ಹೆಚ್ಚುವರಿ ಬಾಬ್ತು ಕೊರತೆ 92,23,934 ರು., ರಾಜಸ್ವ ಸ್ವೀಕೃತಿ 16,56,47,512 ರು., ಪಾವತಿಗಳು 16, 56,37.576 ರು., ರಾಜಸ್ವ ಖಾತೆಯ ಹೆಚ್ಚುವರಿ ಕೊರತೆ 2,23,534 ರು., ಬಂಡವಾಳ ಖಾತೆ 30,88,8502 ರು., ಬಂಡವಾಳ ಸ್ವೀಕೃತಿ 10,88,88,02 ರು., ಬಂಡವಾಳ ಖಾತೆಯಲ್ಲಿನ ಪಾವತಿಗಳು, ಕೊರತೆ 29,69,999 ರು. ಇದೆ ಎಂದರು.ಅಸಾಧಾರಣ ಖಾತೆಯಲ್ಲಿ ಸ್ವೀಕೃತಿ 9,98,74,315 ರು., ಪಾವತಿಗಳು 9,98,74,315 ರು., ಒಟ್ಟು ಉಳಿತಾಯ 31,93,933 ರು. ಆಗಿದೆ ಎಂದು ಘೋಷಣೆ ಮಾಡಿದರು.
ಪ್ರಮುಖ ಆದಾಯದ ಕುರಿತು ಮಾತನಾಡಿದ ಶ್ರೀನಿವಾಸ್, ಆಸ್ತಿ ತೆರಿಗೆ ಮೂಲಕ 3. 45 ಕೋಟಿ ರು. ಆಸ್ತಿ ತೆರಿಗೆ ದಂಡ 5 ಲಕ್ಷ ರು. ಮಳಿಗೆಗಳ ಬಾಡಿಗೆಯಿಂದ 24.25 ಲಕ್ಷ ರು., ನಿವೇಶನ ಅಭಿವೃದ್ಧಿ 16 ಲಕ್ಷ ರು., ಕರ ಸಂಗ್ರಹಣ ಮೊತ್ತ 8.46 ಲಕ್ಷ ರು. ಸೇರಿದಂತೆ ಎಲ್ಲ ಮೂಲಗಳಿಂದ ಒಟ್ಟು 37,46,15,829 ರು. ಆದಾಯ ನಿರೀಕ್ಷಿಸಲಾಗಿದೆ ಎಂದರು.ಕಡೂರು ಅಭಿವೃದ್ಧಿಗೆ ಹೊಸ ಯೋಜನೆಗಳು
ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕಡೂರು ಅಭಿವೃದ್ಧಿಗೆ ಪುರಸಭೆಯಿಂದ ಹೊಸ ಯೋಜನೆಗಳನ್ನು ಪ್ರಕಟಿಸಿದರು. ಪಟ್ಟಣದ ಸರ್ಕಾರಿ ಶಾಲೆಯನ್ನು ದತ್ತು ಪಡೆಯುವುದು. ಸ್ವಚ್ಛ ಭಾರತ್ ಮಿಷನ್ 2.0 ಮಾಹಿತಿ ಶಿಕ್ಷಣ ಮತ್ತು ಸಂವಹನ ಜಾಗೃತಿ ಮೂಡಿಸುವುದು. ಪೌರ ಕಾರ್ಮಿಕರಿಗೆ ಉಚಿತ ನಿವೇಶನ ನೀಡಿಕೆ, ಪ್ರಮುಖ ವೃತ್ತಗಳಲ್ಲಿ ಸರ್ಕಾರದ ಹಾಗೂ ಪುರಸಭೆಯ ಕಾರ್ಯಕ್ರಮಗಳ ಪ್ರಚಾರಕ್ಕೆ ಎಲ್ಇಡಿ ಅಳವಡಿಕೆ, ಆಧುನಿಕ ತಿನಿಸಿನ ಅಂಗಡಿಗಳು, ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಲಬಾಗದಲ್ಲಿ ಆಧುನಿಕ ರೀತಿಯ ಹೂವಿನ ಅಂಗಡಿಗಳು, ನವೀನ ಮಾದರಿಯ ಮಳಿಗೆಗಳ ನಿರ್ಮಾಣ, ಪಟ್ಟಣದ ಸೌಂದರ್ಯ ಹೆಚ್ಚಿಸಲು ಮನೆಗೊಂದು ಮರ, ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ವಿನೂತನ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.ಉಪಾದ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಜಿ.ಸೋಮಯ್ಯ, ಸೈಯ್ಯದ್ ಯಾಸೀನ್, ಮನು ಮರುಗುದ್ದಿ, ಈರಳ್ಳಿ ರಮೇಶ್ ಮತ್ತಿತರರು ಮಾತನಾಡಿದರು. ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಸದಸ್ಯರು, ಅಧಿಕಾರಿ ವರ್ಗ, ಪುರಸಭೆ ಸಿಬ್ಬಂದಿ ಹಾಜರಿದ್ದರು.