ಬೀರೂರುಹಿಂದಿನ ಸರ್ಕಾರಗಳ ಅವಧಿಯಲ್ಲಿ ಭದ್ರಾ ಉಪಕಣಿವೆ ಯೋಜನೆಯಡಿ ಕಡೂರು ತಾಲೂಕಿನ 118 ಕೆರೆಗಳ ತುಂಬಿಸುವ ಯೋಜನೆಗೆ ಶಂಕುಸ್ಥಾಪನೆಯಾದರೂ ಸೂಕ್ತ ಅನುದಾನ ಸಿಗದೆ ನೆನೆಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಶಾಸಕನಾದ ಮೇಲೆ ಈ ಯೋಜನೆಯನ್ನು ಕೇಂದ್ರದ ನಬಾರ್ಡ ಯೋಜನೆಗೆ ಸೇರಿಸಿ ₹455 ಕೋಟಿ ಅನುದಾನ ಬಿಡುಗಡೆ ನಂತರ ಬರಿದಾದ ಕೆರೆಗಳು ತುಂಬುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ದೊಡ್ಡಘಟ್ಟ ಗ್ರಾಮದ ಕೋಡಿ ಬಿದ್ದ ಕೆರೆಗಳಿಗೆ ಬಾಗಿನ ಸಮರ್ಪಣೆ:

ಕನ್ನಡಪ್ರಭ ವಾರ್ತೆ, ಬೀರೂರು

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭದ್ರಾ ಉಪಕಣಿವೆ ಯೋಜನೆಯಡಿ ಕಡೂರು ತಾಲೂಕಿನ 118 ಕೆರೆಗಳ ತುಂಬಿಸುವ ಯೋಜನೆಗೆ ಶಂಕುಸ್ಥಾಪನೆಯಾದರೂ ಸೂಕ್ತ ಅನುದಾನ ಸಿಗದೆ ನೆನೆಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಶಾಸಕನಾದ ಮೇಲೆ ಈ ಯೋಜನೆಯನ್ನು ಕೇಂದ್ರದ ನಬಾರ್ಡ ಯೋಜನೆಗೆ ಸೇರಿಸಿ ₹455 ಕೋಟಿ ಅನುದಾನ ಬಿಡುಗಡೆ ನಂತರ ಬರಿದಾದ ಕೆರೆಗಳು ತುಂಬುತ್ತಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ದೊಡ್ಡಘಟ್ಟ ಗ್ರಾಮದಲ್ಲಿ ಬುಧವಾರ ಊರ ಮುಂದಿನ ಕೆರೆ ಹಾಗೂ ವಡವಿನಕೆರೆ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಸತತ ಭೀಕರ ಬರ ಎದುರಿಸಿದ್ದ ಕಡೂರು ತಾಲೂಕಿನ ರೈತರಿಗೆ ಇಂದು ಭರವಸೆ ಬೆಳಕು ಮೂಡಿದೆ. ತಾಲೂಕಿನ 118 ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಗೆ ದೊಡ್ಡಘಟ್ಟವೇ ರಿಸೀವಿಂಗ್ ಚೇಂಬರ್. ಭದ್ರಾ ನದಿಯಿಂದ ಏತ ನೀರಾವರಿ ಮೂಲಕ ಹರಿದುಬರುವ ನೀರು ಮೊದಲು ದೊಡ್ಡಘಟ್ಟ ತಲುಪಿ, ನಂತರ ಇಡೀ ತಾಲೂಕಿಗೆ ಹರಿಯಬೇಕಿದೆ. ಈ ಐತಿಹಾಸಿಕ ಕೆರೆಗಳಿಗೆ ಮೊದಲು ಬಾಗಿನ ಅರ್ಪಿಸುವ ಭಾಗ್ಯ ಲಭಿಸಿರುವುದು ನನ್ನ ಪುಣ್ಯ ಎಂದರು.

ಹಂತ ಹಂತವಾಗಿ ಸಾಗಲಿದ ಯೋಜನೆ:

ಮೊದಲ ಹಂತ: ದೊಡ್ಡಘಟ್ಟದ ಮಡುವಿನ ಕೆರೆ, ಊರ ಮುಂದಲ ಕೆರೆ, ಕೀರನಕಟ್ಟೆ, ಬಿ.ಕೋಡಿಹಳ್ಳಿ ಕೆರೆ ಹಾಗೂ ಬೀರೂರಿನ ದೇವನಕೆರೆ ಭರ್ತಿ ಸೇರಿ ಒಟ್ಟು 16ಕೆರೆಗಳು ತುಂಬಲಿವೆ.

2ನೇ ಹಂತ: ದೇವನಕೆರೆಯಿಂದ ಗುರುತ್ವಾಕರ್ಷಣಾ ಬಲದ ಮೂಲಕ ನೀರು ಹರಿದು ಅಲ್ಲಿಂದ ಒಟ್ಟು 52 ಕೆರೆಗಳಿಗೆ ನೀರು ಹರಿಯಲಿದೆ. ಇದರಲ್ಲಿ ಗಾಳಿಹಳ್ಳಿ, ದೋಗೆಹಳ್ಳಿ, ಹುಲ್ಲೇಹಳ್ಳಿ, ಕಾಮನ ಕೆರೆ, ಹಿರೇನಲ್ಲೂರು, ಮೇಲನಹಳ್ಳಿ, ಗಿರಿಯಾಪುರ, ಚಿಕ್ಕನಲ್ಲೂರು, ತಂಗಲಿ ಕೆರೆ, ಮಲ್ಲಾಘಟ್ಟ, ಕುಪ್ಪಾಳು, ವಿಷ್ಣುಸಮುದ್ರ ಹಾಗೂ ಮಲ್ಲಘಟ್ಟ ಕೆರೆಗಳು ಸೇರಿವೆ.

3ನೇ ಹಂತ: ತಂಗಲಿ ಕೆರೆಯಿಂದ ಕಡೂರಹಳ್ಳಿ, ಬಳ್ಳೇಕೆರೆ, ಬಂಜೆನಹಳ್ಳಿ, ಮರಡೀಹಳ್ಳಿ, ಪಟ್ಟಣಗೆರೆ, ಆಲಘಟ್ಟ, ಜಿಗಣೆಹಳ್ಳಿ, ನಿಡುಗಟ್ಟ ಹಾಗೂ ಕೆ.ಬಿದರೆ ಹಳ್ಳಿ ಸೇರಿ ಸುಮಾರು 38 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಕ್ರಮ.

₹455ಕೋಟಿಯ 4ನೇ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದರಲ್ಲಿ ಮಲ್ಲಾಘಟ್ಟ ಕೆರೆ ಯಿಂದ ಗುರುತ್ವಾ ಕರ್ಷಣೆ ಮೂಲಕ ಸಿಂಗಟಗೆರೆ, ಸೋಮನಹಳ್ಳಿ, ಮಂಚನಹಳ್ಳಿ , ಅಣಿಗೆರೆ, ಗರುಗದ ಹಳ್ಳಿ ಗಂಗನಹಳ್ಳಿ ಸುತ್ತಮುತ್ತಲ 36ಕೆರೆಗಳು ತುಂಬಲಿವೆ.

ಒಟ್ಟಾರೆ ಕೆರೆತುಂಬಿಸುವ ಯೋಜನೆಗೆ 3ವರ್ಷಗಳ ಅವಧಿಯಲ್ಲಿ ₹1500ಕೋಟಿ ಬಿಡುಗಡೆಯಿಂದ ಕಾಮಗಾರಿ ನಡೆಯುತ್ತಿವೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರದ ಜನ ನೆನೆಯಲೇಬೇಕಾಗಿದೆ. ಬರುವ ಜೂನ್ ವೇಳೆಗೆ ಬಹುತೇಕ ಕೆರೆ ತುಂಬಿಸುವ ಗುರಿ ಹೊಂದಿದ್ದು, ಮುಂದಿನ ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ಯೋಜನೆ ತಾಲೂಕಿನ ರೈತರಿಗೆ ಸಮರ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಕ್ಷೇತ್ರದಲ್ಲಿ ಕೆಲವು ಮಾಜಿ ಶಾಸಕರು ನೀರಾವರಿ ಯೋಜನೆ ಫಲಶೃತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕಡೂರು ಕ್ಷೇತ್ರದ ನೀರಾವರಿ ಯೋಜನೆಗಳ ಬಗ್ಗೆ ಅವರ ಅವಧಿಯಲ್ಲಿ ಸದನದಲ್ಲಿ ಧ್ವನಿ ಎತ್ತಿದ್ದರ ಬಗ್ಗೆ ಯಾವುದಾದರು ವಿಡಿಯೋಗಳಿದ್ದರೆ ಅದನ್ನು ಜನತೆಗೆ ತೋರಿಸಲಿ ಎಂದು ಸವಾಲು ಹಾಕಿದರು.

ಮತ್ತೊಮ್ಮೆ ಆಯ್ಕೆ ಮಾಡಿದರೆ ಅಭಿವೃದ್ಧಿ ಕಾಣಲಿದೆ ಕ್ಷೇತ್ರ:

ಕೇವಲ 5ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಯಾವ ಶಾಸಕರಿಂದಲೂ ಆಗದು. ಆದರೆ ಅರಸೀಕೆರೆ, ಹೊಳೆ ನರಸೀಪುರದ ಮತ್ತಿತರ ನಾಲ್ಕೈದು ಬಾರಿ ಒಂದೇ ಶಾಸಕರನ್ನು ಆರಿಸುವಂತ ಮನೋಭಾವ ಮತದಾರರಲ್ಲಿ ಬಂದಾಗ ಮಾತ್ರ ವಿಧಾನ ಸೌದಲ್ಲಿ ಧ್ವನಿ ಎತ್ತಿ ಕ್ಷೇತ್ರದ ಅಭಿವೃದ್ಧಿ ಇತರೆ ಕ್ಷೇತ್ರಗಳಂತೆ ಮಾಡಲು ಸಾಧ್ಯ ಎಂದರು.

ಈ ಸಮಾರಂಭದಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ಹರ್ಷ, ಬೀರೂರುಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್, ಗ್ರಾಪಂ ಮಾಜಿ ಅಧ್ಯಕ್ಷ ಆನಂದ್, ತಾಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಮುಬಾರಕ್, ಆರೀಫ್, ಬಾವಿಮನೆ ಮಧು, ಮೂರ್ತಿ, ಗಂಗರಾಜ್, ಗೋವಿಂದಣ್ಣ, ಅಣ್ಣೇಗೌಡ, ಬಿ.ಜಿ.ಮೈಲಾರಪ್ಪ, ರಂಗನಾಥ್, ಹನುಮೇಗೌಡ, ವೆಂಕಟೇಶ್, ರವಿಯಣ್ಣ, ಪ್ರಕಾಶ್, ಚಿಕ್ಕಯ್ಯ, ಕುಮಾರಣ್ಣ, ಚಂದ್ರಶೇಖರ್.ಎ ಹಾಗೂ ದೊಡ್ಡಘಟ್ಟ ಗ್ರಾಮದ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

14 ಬೀರೂರು 1

ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಬುಧವಾರ ಊರ ಮುಂದಿನ ಕೆರೆ ಹಾಗೂ ವಡವಿನಕೆರೆಗಳು ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಶಾಸಕ ಕೆ.ಎಸ್.ಆನಂದ್ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಿಸಿದರು. ಎಇಇ ಹರ್ಷ, ಗಂಗರಾಜು , ಹನುಮೇಗೌಡ, ಗೋವಿಮದಪ್ಪ ಸೇರಿದಂತೆ ಮತ್ತಿತರರಿದ್ದರು.

14 ಬೀರೂರು 2

ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದ ಅಂಬೇಡ್ಕರ್ ನಗರದಲ್ಲ್ಲಿ ಬುಧವಾರ ಶ್ರೀ ಗುಳ್ಳಮ್ಮ ಮತ್ತು ಅಂತರಘಟ್ಟ ದೇವಾಲುದ ಮುಂಭಾಗದ ಶೆಡ್ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ಚಿಕ್ಕಯ್ಯ , ಗಂಗರಾಜು, ಮೂರ್ತಿ, ಬಸವರಾಜ್, ರವಿಕುಮಾರ್ , ಶಿವಣ್ಣ ಸೇರಿದಂತೆ ಮತ್ತಿತರರು ಇದ್ದರು.