ಕನ್ನಡಪ್ರಭದ ಸರಣಿ ವರದಿಗಳ ಬಳಿಕ ತೆರವಾಗಿದ್ದ ಕಾಗೆಹಳ್ಳವನ್ನು ಮತ್ತೆ ಪೊಲೀಸರು ಮುಚ್ಚಿ ಹಾಕಿದ್ದೇ, ಮಳೆ ಬಂದಾಗ ಮಳೆ ನೀರು ಹರಿಯಲು ದಾರಿಯಿಲ್ಲದೆ ರಸ್ತೆಗಳ ಮೇಲೆಲ್ಲ ಹರಿದು ಪಟ್ಟಣದ ಹಲವು ರಸ್ತೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕನ್ನಡಪ್ರಭದ ಸರಣಿ ವರದಿಗಳ ಬಳಿಕ ತೆರವಾಗಿದ್ದ ಕಾಗೆಹಳ್ಳವನ್ನು ಮತ್ತೆ ಪೊಲೀಸರು ಮುಚ್ಚಿ ಹಾಕಿದ್ದೇ, ಮಳೆ ಬಂದಾಗ ಮಳೆ ನೀರು ಹರಿಯಲು ದಾರಿಯಿಲ್ಲದೆ ರಸ್ತೆಗಳ ಮೇಲೆಲ್ಲ ಹರಿದು ಪಟ್ಟಣದ ಹಲವು ರಸ್ತೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಕಾಗೆಹಳ್ಳವನ್ನು ಕಳೆದ ಎರಡು ವರ್ಷಗಳ ಹಿಂದೆ ಕನ್ನಡಪ್ರಭ ಹಾಗೂ ಕಸಾಪ ಅಧ್ಯಕ್ಷರ ಹೋರಾದ ಫಲವಾಗಿ ಅಂದಿನ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಹಾಗೂ ಪೊಲೀಸ್‌ ಠಾಣೆಯ ಹಿಂಭಾಗ ಒತ್ತುವರಿಯಾಗಿದ್ದ ಕಾಗೆಹಳ್ಳ ತೆರವುಗೊಳಿಸಿದ್ದರು.

ಆದರೆ ತೆರವಾದ ಕೆಲವೇ ತಿಂಗಳಲ್ಲಿ ಸದ್ದಿಲ್ಲದೇ ಪೊಲೀಸರು ಕಾಗೆ ಹಳ್ಳದೊಳಗೆ ದೊಡ್ಡ ದೊಡ್ಡ ಪೈಪ್‌ಗಳನ್ನು ಹಾಕಿ ಕಾಗೆಹಳ್ಳಕ್ಕೆ ಮಣ್ಣು ತುಂಬಿ ಮುಚ್ಚಿ ಹಾಕಿ,ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು ಸ್ಥಳ ಮಾಡಿಕೊಂಡಿದ್ದಾರೆ.

ಈಗ ಮಳೆ ಬಂದಾಗ ಪೈಪ್‌ನಲ್ಲಿ ನೀರು ಹೋಗುತ್ತಿಲ್ಲ. ನೀರಿನ ರಭಸಕ್ಕೆ ಪೈಪ್‌ ಮೇಲೆ ಹಾಗೂ ಅಕ್ಕಪಕ್ಕದ ಮಣ್ಣು ಕೊಚ್ಚಿ ಹೋಗಿ ಪೈಪ್‌ಗಳು ಬಯಲಾಗಿ ಬಿದ್ದಿವೆ. ಮಳೆ ನೀರು ಹಳ್ಳದಲ್ಲಿ ಹರಿಯದೆ ನೇರವಾಗಿ ರಸ್ತೆ ಮೇಲೆ ಹರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇದು ಒಂದೇ ಅಲ್ಲ:

ಕಾಗೆಹಳ್ಳದಂತೆ ಪಟ್ಟಣದ ಬಡಗಲ ದಿಕ್ಕಿನ ಇನ್ನೂ ನಾಲ್ಕು ಹಳ್ಳಗಳು ನಶಿಸುತ್ತಿವೆ.ಹೊಂಗೆಹಳ್ಳ ಇಟ್ಟಿಗೆ ಫ್ಯಾಕ್ಟರಿ ಬಾಲು ಜಮೀನಿನಿಂದ ಹಿಡಿದು ದುಂದಾಸನಪುರದವರೆಗೂ ಮುಚ್ಚಿ ಹಾಕಲಾಗಿದೆ.

ಮಾತೆಕಟ್ಟೆ ಹಳ್ಳ:

ವಿಜಯ್ ಗ್ಯಾಸ್ ಏಜೆನ್ಸಿ ಪಕ್ಕ ಹಾದು ಹೋಗುವ ಈ ಹಳ್ಳವನ್ನು ಲೇಔಟ್ ಮಾಡುವವರು ಮತ್ತು ನ್ಯಾಷನಲ್ ಹೈವೇದವರು ಅತಿಕ್ರಮಿಸಿದ್ದಾರೆ.ಕೆಬ್ಬೆಕಟ್ಟೆ ಹಳ್ಳ ಮತ್ತು ನೇನೇಕಟ್ಟೆ ಹಳ್ಳ: ಇವು ಕೂಡ ಪ್ರಭಾವಿಗಳಿಂದ ಒತ್ತುವರಿಯಾಗಿವೆ.

ಈ ಎಲ್ಲಾ ಹಳ್ಳಗಳು ಇತ್ತೀಚೆಗೆ ಸುರಿದ ಮಳೆಗೆ ಮೈದುಂಬಿ ಹರಿದು ನಲ್ಲೂರು ಅಮಾನಿಕೆರೆ ಸೇರಿದ್ದವು. ಆದರೆ ಅವುಗಳ ದಾರಿಯುದ್ದಕ್ಕೂ ಒತ್ತುವರಿಯಾಗಿದೆ.ಬಲಿಷ್ಠರ ಕೈವಶವಾಗಿರುವ ಹಳ್ಳಗಳನ್ನು ಬಿಡಿಸಿಕೊಡಿ: ರಾಜ ಕಾಲುವೆ ಹಾಗೂ ನೀರು ಹರಿಯುವ ಹಳ್ಳಗಳ ತೆರವು ಅಭಿಯಾನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶೈಲಕುಮಾರ್ ಎಂ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ಇರುವ ರಾಜ ಕಾಲುವೆ ಹಾಗೂ ನೀರು ಹಳ್ಳಗಳು ಒತ್ತುವರಿಯಾಗಿವೆ ಕೂಡಲೇ ಒತ್ತುವರಿ ಬಿಡಿಸಿ ಮಳೆ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.