ಸಾರಾಂಶ
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ. ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು.ಸಿದ್ದಾಪುರ ಮಂಡಲದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಲು ಕಾರ್ಯಕರ್ತರು ಶ್ರಮಿಸಬೇಕು. ಇದು ನಮ್ಮ ದೇಶದ ಚುನಾವಣೆ, ದೇಶ ರಕ್ಷಣೆಯ ಚುನಾವಣೆ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಚುನಾವಣೆ. ದೇವಮಾನವ ಮೋದಿ ಅವರು ನಮ್ಮ ದೇಶದ ರಕ್ಷಣೆಗೆ ಹಾಗೂ ದೇಶದ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇಂದು ಇಡಿ ಜಗತ್ತೇ ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹಾಗಾಗಿ ಮುಂದೆ ನಮ್ಮ ದೇಶದ ಅಭಿವೃದ್ಧಿಗೆ ಮತ್ತು ರಕ್ಷಣೆಗೆ ನಮ್ಮ ಜಿಲ್ಲೆಯ ಅಭ್ಯರ್ಥಿಯನ್ನು ನಾವು ಗೆಲ್ಲಿಸಿ ಕಳಿಸುವುದರ ಮೂಲಕ ಮೋದಿಜಿಯವರಿಗೆ ನಮ್ಮ ಉಡುಗೊರೆಯನ್ನು ನೀಡಬೇಕು ಎಂದರು.
ಬಿಜೆಪಿ ಈಗ ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ನರೇಂದ್ರ ಮೋದಿ ಸಹ ಜಾಗತಿಕ ನಾಯಕರಾಗಿದ್ದಾರೆ. ಪಕ್ಷ ಬಲಿಷ್ಠ ಶಕ್ತಿಯಾಗಿ ಬೆಳೆಯಲು ನಾಯಕರ ಜತೆಗೆ ಕಾರ್ಯಕರ್ತರ ಶ್ರಮವೂ ಕಾರಣ. ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಕಾರ್ಯಕರ್ತರ ಶ್ರಮ ಇದೆ. ಮತ್ತೊಮ್ಮೆ ಬಿಜೆಪಿಯ ಜಯಭೇರಿಗಾಗಿ ನಿರಂತರವಾಗಿ ದುಡಿಯೋಣ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಸಿದ್ಧಾಪುರ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಮೋದಿ ಕಾರ್ಯಕ್ರಮಕ್ಕೆ ಸಿದ್ಧತೆಏ. 28ರಂದು ಶಿರಸಿಯಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸಿದ್ಧತೆಯನ್ನು ರೂಪಾಲಿ ಎಸ್. ನಾಯ್ಕ, ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ, ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಗಿರೀಶ ಪಟೇಲ್ ಮತ್ತಿತರ ಪ್ರಮುಖರೊಂದಿಗೆ ವೀಕ್ಷಿಸಿದರು. ಕಾರ್ಯಕ್ರಮದ ಪ್ರಬಂಧಕರಿಗೆ, ಕಾರ್ಯಕರ್ತರಿಗೆ ಕಾರ್ಯಕ್ರಮದ ಸಿದ್ಧತೆ, ವ್ಯವಸ್ಥೆ ಬಗ್ಗೆ ಸಲಹೆ ನೀಡಿದರು.