ಇಲ್ಲಿನ ಕಾಳಿ ಸೇತುವೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾನ್ಯಾಸ ನೆರವೇರಿಸಿ, ₹150 ಕೋಟಿ ವೆಚ್ಚದಲ್ಲಿ ಮೂರು ವರ್ಷಗಳೊಳಗೆ ಸೇತುವೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

₹150 ಕೋಟಿ ವೆಚ್ಚ, 3 ವರ್ಷಗಳಲ್ಲಿ ಸೇತುವೆ ಸಿದ್ಧ

ಕನ್ನಡಪ್ರಭ ವಾರ್ತೆ ಕಾರವಾರ

ಇಲ್ಲಿನ ಕಾಳಿ ಸೇತುವೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾನ್ಯಾಸ ನೆರವೇರಿಸಿ, ₹150 ಕೋಟಿ ವೆಚ್ಚದಲ್ಲಿ ಮೂರು ವರ್ಷಗಳೊಳಗೆ ಸೇತುವೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

2024ರ ಆಗಸ್ಟ್‌ನಲ್ಲಿ ಸೇತುವೆ ಕುಸಿದಿತ್ತು. ನಂತರ ಕುಸಿದ ಸೇತುವೆಯ ಅವಶೇಷಗಳನ್ನು ದಾಖಲೆ ಅವಧಿಯಲ್ಲಿ ತೆರವುಗೊಳಿಸಿ ಈಗ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಇದು ಶಿಷ್ಟಾಚಾರದ ಕಾರ್ಯಕ್ರಮ ಅಲ್ಲ. ಸೇತುವೆ ಸ್ಥಳ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಪೂಜೆ ನೆರವೇರಿಸಿದ್ದೇನೆ. ಸೇತುವೆ ನೂರಕ್ಕೆ ನೂರರಷ್ಟು ಕೇಂದ್ರ ಸರ್ಕಾರದ ಹಣದಿಂದ ಆಗುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾಮಗಾರಿ ನಡೆಸುತ್ತೇವೆ. ಐಆರ್‌ಬಿ ಅಡಿಯಲ್ಲಿ ಪೋದ್ದಾರ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಸೇತುವೆ ನಿರ್ಮಿಸಲಿದೆ. 122 ಮೀ. ಉದ್ದದ ಈ ಸೇತುವೆಗೆ 6 ಕಂಬಗಳನ್ನು ಅಳಡಿಸಲಾಗುವುದು. ಒಂದೊಂದು ಕಂಬ 12 ಮೀಟರ್ ಅಗಲ ಇರಲಿದೆ ಎಂದು ವಿವರಿಸಿದರು.

ಕಾಳಿ ಸೇತುವೆಗೆ ಶಾಶ್ವತವಾಗಿ ವಿದ್ಯುದ್ದೀಪ ಅಳವಡಿಸಲಾಗುವುದು. ಶರಾವತಿ ನದಿಗೂ ಹೊಸ ಸೇತುವೆ ನಿರ್ಮಿಸುತ್ತೇವೆ. ಚತುಷ್ಪಥ ಹೆದ್ದಾರಿಯಲ್ಲಿ ಮೂರು ಕಡೆ ಅಂಡರ್ ಪಾಸ್ ನಿರ್ಮಾಣ ಆಗಲಿದೆ. ಕೆಲವು ಸಣ್ಣ ಪುಟ್ಟ ಕಾಮಗಾರಿಗಳು ಆಡಳಿತಾತ್ಮಕ ಸಮಸ್ಯೆಯಿಂದ ಆಗುತ್ತಿಲ್ಲ. ಅಗತ್ಯ ಕಾಮಗಾರಿಗಳನ್ನು ಆದ್ಯತೆ ಮೇಲೆ ನಡೆಸಲಾಗುವುದು ಎಂದು ಕಾಗೇರಿ ತಿಳಿಸಿದರು.

ಪೋದ್ದಾರ್ ಕಂಪನಿಯ ವಿಜಯ ಮದನಕರ ಸೇತುವೆಯ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ನಗರಸಭೆ ಸದಸ್ಯರು ಇದ್ದರು.ಶಿಷ್ಟಾಚಾರ ಪಾಲಿಸಲಾಗಿಲ್ಲ

ಸೇತುವೆ ಶಿಲಾನ್ಯಾಸ ಮುಗಿದು ಸಂಸದರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದಾಗ ಆಗಮಿಸಿದ ಶಾಸಕ ಸತೀಶ ಸೈಲ್, ಶಿಲಾನ್ಯಾಸದಲ್ಲಿ ಶಿಷ್ಟಾಚಾರ ಪಾಲಿಸಲಾಗಿಲ್ಲ. ಸಿಎಂ, ಲೋಕೋಪಯೋಗಿ ಸಚಿವರನ್ನು ಆಹ್ವಾನಿಸಬೇಕಿತ್ತು. ವಿಧಾನಪರಿಷತ್ ಸದಸ್ಯರನ್ನೂ ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡ ಸೈಲ್, ಒಂದು ಹಂತದಲ್ಲಿ ಶಿಲಾನ್ಯಾಸ ಮಾಡಿದನ್ನು ತೆಗೆಯುವುದಾಗಿ ಹೇಳಿದರು.

ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿದ್ದರೂ ತಿಂಗಳುಗಳಿಂದ ಕಾಣದ ಸತೀಶ ಸೈಲ್ ಈಗ ಏಕಾಏಕಿ ತಮ್ಮನ್ನು ಆಹ್ವಾನಿಸಲಾಗಿಲ್ಲ. ಶಿಷ್ಟಾಚಾರ ಪಾಲಿಸಲಾಗಿಲ್ಲ ಎಂದು ಪ್ರತ್ಯಕ್ಷರಾಗಿದ್ದು ಅಚ್ಚರಿಗೆ ಕಾರಣವಾಯಿತು.