ಸಾರಾಂಶ
ಕಾರವಾರ: ಕೈಗಾ ಸುತ್ತಮುತ್ತಲಿನ ಜನತೆ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೈಗಾ ಅಣು ವಿದ್ಯುತ್ ಯೋಜನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ಹಾಗೂ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಕೈಗಾಕ್ಕೆ ಭೇಟಿ ನೀಡಿದ ಕಾಗೇರಿ, ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಗತ್ಯ ವಿವರಗಳನ್ನು ಪಡೆದರು. ಕೈಗಾದ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಆರೋಪದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡಿ, ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕೈಗಾದ ಕಾರ್ಮಿಕರ ಸುರಕ್ಷತೆ, ಸುತ್ತಮುತ್ತಲಿನ ಜನತೆಯ ಆರೋಗ್ಯದ ಬಗ್ಗೆಯೂ ಮಾತುಕತೆ ನಡೆಸಿದರು. ಕೈಗಾದ ಅಭಿವೃದ್ಧಿಯ ಜತೆಗೆ ಜನತೆಯ ಆರೋಗ್ಯ ರಕ್ಷಣೆಯೂ ಮಹತ್ವಪೂರ್ಣವಾದುದು ಎಂದರು. ಕೈಗಾ ಯೋಜನೆಯ ಸಿಎಸ್ಆರ್ ನಿಧಿಯಿಂದ ಸ್ಥಳೀಯವಾಗಿ ಕೆಲಸಗಳು ಆಗಿವೆ. ಆಗುತ್ತಿವೆ. ಆದರೆ ಈ ನಿಧಿಯಿಂದ ಇನ್ನಷ್ಟು ಹೆಚ್ಚು ಕೆಲಸಗಳು ಆಗಬೇಕು ಎಂದು ಅಭಿಪ್ರಾಯಪಟ್ಟರು. ಕೈಗಾದ ಸೈಟ್ ಡೈರೆಕ್ಟರ್ ಪ್ರಮೋದ ರಾಯಚೂರ ಮತ್ತಿತರರು ಇದ್ದರು. ಸಂಸದರೊಬ್ಬರು ಮೊದಲ ಬಾರಿ ಕೈಗಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹೀಗಾಗಿ ಈ ಸಭೆ ಗಮನ ಸೆಳೆಯುವಂತಾಗಿದೆ. ಸಸಿ ನೆಟ್ಟ ಸಂಸದ
ಚೌಪದಿಯ ಬ್ರಹ್ಮ ದಿನಕರ ದೇಸಾಯಿ ಹೆಸರಿನಲ್ಲಿ ಸಸಿಯನ್ನು ನೆಡುವ ಮೂಲಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಮನ ಸೆಳೆದರು. ಪ್ರಧಾನಿ ಮೋದಿ ತಾಯಿ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಸೂಚಿಸಿದ್ದು, ಈ ಜಿಲ್ಲೆಯ ಕವಿ, ಜನನಾಯಕ, ಅಭಿವೃದ್ಧಿಗೆ ಕೊಡುಗೆ ನೀಡಿದ ದಿ. ದಿನಕರ ದೇಸಾಯಿ ಹೆಸರಿನಲ್ಲಿ ಗಿಡ ನೆಡಲು ಅವಕಾಶ ದೊರಕಿದ್ದು, ಅತ್ಯಂತ ಸಂತಸ ತಂದಿದೆ ಎಂದು ಕಾಗೇರಿ ತಿಳಿಸಿದರು.