ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಭೂಹೀನರಿಗೆ ಭೂಮಿಕೊಟ್ಟ ಕಾಗೋಡು ತಿಮ್ಮಪ್ಪನವರು ನೂರು ಕಾಲ ಬದುಕಬೇಕು. ೯೪ರ ಹರೆಯದಲ್ಲೂ ಕಾಗೋಡು ಸಾಹೇಬರಲ್ಲಿ ಭೂಹೀನರಿಗೆ ಭೂಮಿ ಕೊಡಬೇಕು ಎನ್ನುವ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ಕಾಗೋಡು ತಿಮ್ಮಪ್ಪನವರ ೯೪ನೇ ಜನ್ಮದಿನದ ಅಂಗವಾಗಿ ಇಲ್ಲಿನ ಗಾಂಧಿ ಮಂದಿರದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು, ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಂಬಂಧದಲ್ಲಿ ಸೋದರಮಾವ ಕಾಗೋಡು ತಿಮ್ಮಪ್ಪನವರು ನನಗೆ ರಾಜಕೀಯ ಸ್ಪೂರ್ತಿ ನೀಡಿದವರು. ನನಗೆ ಎಸ್.ಬಂಗಾರಪ್ಪನವರು ರಾಜಕೀಯ ಕ್ಷೇತ್ರದ ಮೊದಲ ಗುರುವಾದರೆ ಕಾಗೋಡು ತಿಮ್ಮಪ್ಪನವರು ಎರಡನೇ ಗುರುವಾಗಿ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಇಂದಿಗೂ ಕಾಗೋಡು ತಿಮ್ಮಪ್ಪನವರ ಜನಪರ ಕಾಳಜಿ ಪ್ರಶ್ನಾತೀತವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಕಾಗೋಡು ತಿಮ್ಮಪ್ಪನವರ ಪಾತ್ರ ಪ್ರಮುಖವಾಗಿದೆ. ಅವರ ಜನ್ಮದಿನವನ್ನು ರಕ್ತದಾನದಂತಹ ಸಾಮಾಜಿಕ ಕೆಲಸದ ಮೂಲಕ ಮಾಡಿರುವುದು ಸಂತೋಷದ ಸಂಗತಿ ಎಂದು ಹೇಳಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಅಭಿಮಾನ ಮತ್ತು ಆಶೀರ್ವಾದ ನನಗೆ ಹೆಚ್ಚು ಶಕ್ತಿ ನೀಡಿದೆ. ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಬೇಕು ಎನ್ನುವ ನನ್ನ ನಿರೀಕ್ಷೆಯನ್ನು ನೀವೆಲ್ಲರೂ ನನಸು ಮಾಡಿದ್ದೀರಿ. ರಾಜಕೀಯವಾಗಿ ಜನರ ಪ್ರೀತಿ ವಿಶ್ವಾಸ ಗಳಿಸುವುದು ಕಷ್ಟಸಾಧ್ಯ. ಆದರೆ ನಿಮ್ಮೆಲ್ಲರ ಪ್ರೀತಿಯನ್ನು ಗಳಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶಬಾಬು, ಪ್ರಮುಖರಾದ ಕಲಗೋಡು ರತ್ನಾಕರ, ಶ್ವೇತಾ ಬಂಡಿ, ಅನಿತಾ ಕುಮಾರಿ, ಉಷಾ, ಪ್ರಭಾವತಿ ಇನ್ನಿತರರು ಹಾಜರಿದ್ದರು. ರಕ್ತದಾನ ಶಿಬಿರದಲ್ಲಿ ೫೫ ಯೂನಿಟ್ ರಕ್ತ ಸಂಗ್ರಹಿಸಲಾಯಿತು.