4ನೇ ಬಾರಿಗೆ ಮೋದಿಯವರು ಪ್ರಧಾನಿ ಆಗುವ ಆತಂಕ ಕಾಂಗ್ರೆಸ್ಸಿನವರದು. ಇದಕ್ಕಾಗಿ ದೆಹಲಿ ಮತ್ತಿತರ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅರಾಜಕತೆ ಸೃಷ್ಟಿಗೆ ಮುಂದಾಗಿದ್ದಾರೆ. ದೇಶದಲ್ಲಿ ಗೊಂದಲ ನಿರ್ಮಿಸಿ, ಯುವಜನರನ್ನು ಬೀದಿಗೆ ತಂದು ಕೇಂದ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು:
4ನೇ ಬಾರಿಗೆ ಮೋದಿಯವರು ಪ್ರಧಾನಿ ಆಗುವ ಆತಂಕ ಕಾಂಗ್ರೆಸ್ಸಿನವರದು. ಇದಕ್ಕಾಗಿ ದೆಹಲಿ ಮತ್ತಿತರ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅರಾಜಕತೆ ಸೃಷ್ಟಿಗೆ ಮುಂದಾಗಿದ್ದಾರೆ. ದೇಶದಲ್ಲಿ ಗೊಂದಲ ನಿರ್ಮಿಸಿ, ಯುವಜನರನ್ನು ಬೀದಿಗೆ ತಂದು ಕೇಂದ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.ನಗರದ ಪುರಭವನದ ಆವರಣದಲ್ಲಿ ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ - ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮೂರು ಬಾರಿ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಪರಿವರ್ತನೆ ಹೊಂದಿದೆ. ಇದನ್ನು ಸಹಿಸಿಕೊಳ್ಳಲು ರಾಹುಲ್ ಗಾಂಧಿಗೆ ಆಗುತ್ತಿಲ್ಲ ಎಂದು ದೂರಿದರು.
ರಾಹುಲ್ ಗಾಂಧಿಯವರಿಗೆ ಹೇಗಾದರೂ ಮಾಡಿ ಒಂದು ಬಾರಿಯಾದರೂ ಪ್ರಧಾನಿ ಆಗುವ ಕನಸಿದೆ. ರಾಹುಲ್ ಗಾಂಧಿಗೆ ಮದುವೆಯೂ ಆಗಿಲ್ಲ, ಪ್ರಧಾನಿ ಆಗುವುದು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿಯವರು ಅನಿವಾಸಿ ವಿರೋಧ ಪಕ್ಷದ ನಾಯಕ. ಏನಾದರು ಹೋರಾಟವಿದ್ದರೆ ಭಾರತದಲ್ಲಿ ಇರುತ್ತಾರೆ, ಕಲಾಪವಿದ್ದಾಗ ಬರುತ್ತಾರೆ, ಮತ್ತೆ ಎಲ್ಲಿಗೋ ಹೋಗುತ್ತಾರೆ. ಇವರ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಎನ್ಡಿಎ ಸರ್ಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಲು ಇವರು ಸಂಚು, ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ರಾಹುಲ್ ಗಾಂಧಿ ಮನಸ್ಸು ಮಾಡಿದರೆ 40 ಲಕ್ಷ ಜನರು ಬೀದಿಗಿಳಿದು ದೇಶಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ಜಾರ್ಖಂಡ್ ಸಚಿವ ಅನ್ಸಾರಿ ಹೇಳಿಕೆ ನೀಡಿದ್ದಾರೆ. ಇಂಥ ಅರಾಜಕತೆಯ ಕನಸು ಕಾಣುವವರ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದರು.ಈ ಸರ್ಕಾರ ಕಿತ್ತು ಹಾಕೋಣ:
ಗಣೇಶ ಹಬ್ಬ ಆಚರಿಸಲೂ ಕರ್ನಾಟಕದಲ್ಲಿ ಆಗುತ್ತಿಲ್ಲ. ದೀಪಾವಳಿ, ದಸರಾ ಆಚರಣೆ ಸಂದರ್ಭದಲ್ಲಿ ಹಾಲು, ಮೊಸರಿನ ದರ ತೀವ್ರವಾಗಿ ಹೆಚ್ಚಿಸಿದ್ದಾರೆ. ಈಗ ಸಾಲದು ಎಂಬಂತೆ ಬಸ್ ಪ್ರಯಾಣ ದರ ಹೆಚ್ಚಿಸಿದ್ದಾರೆ. ಇದು ಬಡವರ ವಿರೋಧಿ, ಜನವಿರೋಧಿ ಸರ್ಕಾರ. ಇದನ್ನು ಮನೆಗೆ ಕಳುಹಿಸಲು ನಾವೆಲ್ಲರೂ ಸಿದ್ಧರಾಗಬೇಕು. ರೈತ ವಿರೋಧಿ, ಯುವಜನರ ವಿರೋಧಿ, ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತು ಹಾಕಲು ಮುಂದಾಗೋಣ ಎಂದು ಅವರು ಮನವಿ ಮಾಡಿದರು.