ಪ್ರಜಾಸೌಧ ಸ್ಥಳದ ಬಗ್ಗೆ ಕೈ- ಕಮಲ ಪೈಪೋಟಿ

| Published : Jul 02 2025, 12:20 AM IST

ಸಾರಾಂಶ

₹8.6 ಕೋಟಿ ವೆಚ್ಚದಲ್ಲಿ ಹಳಿಯಾಳ ರಸ್ತೆಗೆ ಹೊಂದಿಕೊಂಡು ಕಂದಾಯ ಇಲಾಖೆಯ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಕಟ್ಟಡದ ಸ್ಥಳ ಬದಲಾವಣೆಗಾಗಿ ಒತ್ತಾಯ ಕೇಳಿ ಬಂದಿದೆ.

ಶಶಿಕುಮಾರ ಪತಂಗೆ

ಅಳ್ನಾವರ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ಸ್ಥಳದ ಬಗ್ಗೆ ಸ್ಥಳೀಯ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಗುಂಪುಗಳ ನಡುವೆ ಹಗ್ಗಜಗ್ಗಾಟ ಶುರುವಾಗಿದೆ. ಅಧಿಕಾರಿಗಳಿಗೆ ಮೇಲಿಂದ ಮೇಲೆ ಪರ, ವಿರೋಧದ ಮನವಿಗಳು ರವಾನೆಯಾಗುತ್ತಿವೆ.

₹8.6 ಕೋಟಿ ವೆಚ್ಚದಲ್ಲಿ ಹಳಿಯಾಳ ರಸ್ತೆಗೆ ಹೊಂದಿಕೊಂಡು ಕಂದಾಯ ಇಲಾಖೆಯ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಕಟ್ಟಡದ ಸ್ಥಳ ಬದಲಾವಣೆಗಾಗಿ ಒತ್ತಾಯ ಕೇಳಿ ಬಂದಿದೆ. ಬಿಜೆಪಿ ಬೆಂಬಲಿತರು ಈ ಜಾಗ ಬೇಡ ಎನ್ನುತ್ತಿದ್ದರೆ, ಕಾಂಗ್ರೆಸ್‌ ಬೆಂಬಲಿತರು ಭೂಮಿಪೂಜೆಯಾದ ಸ್ಥಳದಲ್ಲಿಯೇ ನಿರ್ಮಿಸಬೇಕು ಎನ್ನುತ್ತಿದ್ದಾರೆ. ಮೇಲ್ನೋಟಕ್ಕೆ ಸಾರ್ವಜನಿಕ ಹೋರಾಟವಾದರೂ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖರ ಮುಖಂಡತ್ವದಲ್ಲಿಯೇ ಹೋರಾಟ ಮುನ್ನಡೆಯುತ್ತಿದೆ ಎನ್ನುವುದು ವಿಶೇಷ.

ಪ್ರಜಾಸೌಧ ಸ್ಥಳ ಬದಲಾವಣೆ ವಿಚಾರ ಸಾರ್ವಜನಿಕ ಅನುಕೂಲದ ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ.

ಏತಕ್ಕೆ ವಿರೋಧ?: ಅಳ್ನಾವರ ಪಟ್ಟಣದಿಂದ ಎರಡು ಕಿಮೀ ದೂರದಲ್ಲಿರುವ ಹಳಿಯಾಳ ರಸ್ತೆಯಲ್ಲಿ ಪ್ರಜಾಸೌಧ ನಿರ್ಮಿಸಲು ಯೋಜಿಸಲಾಗಿದೆ. ಇದು ಅಳ್ನಾವರ ತಾಲೂಕಿನ ಕೊನೆಯ ಹದ್ದು, ತಾಲೂಕಿನ ಜನರು ನಿತ್ಯ ಓಡಾಟ ಇರುವುದು ಧಾರವಾಡದ ರಸ್ತೆಯ ಕಡೆಗೆ. ಹಾಗಾಗಿ ತಾಲೂಕಿನ ಜನರು ಅಳ್ನಾವರಕ್ಕೆ ಬಂದು ಅಲ್ಲಿಂದ ಬೇರೆ ಬಸ್ ಹಿಡಿದುಕೊಂಡು ತಾಲೂಕು ಕಚೇರಿಗೆ ಹೋಗಬೇಕಾಗುತ್ತದೆ. ಅದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತದೆ. ಬದಲಾಗಿ ಸದ್ಯ ಖಾಲಿ ಇರುವ ಅಳ್ನಾವರದ ಎಪಿಎಂಸಿಯಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು. ಪಟ್ಟಣದ ಒಳಗಡೆಯೆ ಎಲ್ಲ ಕಚೇರಿಗಳಿಗೆ ಜನರು ಓಡಾಡಲು ಸಾಧ್ಯ. ಏಜೆಂಟರ ಹಾವಳಿಯನ್ನೂ ತಪ್ಪಿಸಬಹುದು ಎನ್ನುವುದು ಒಂದು ಗುಂಪಿನ ವಾದವಾದರೆ, ಈಗ ಭೂಮಿಪೂಜೆಯಾಗಿರುವ ಜಾಗದ ಸಮೀಪದ ಪಿಯುಸಿ ಕಾಲೇಜು, ಪದವಿ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ವಿವಿಧ ಹಾಸ್ಟೆಲ್‌ಗಳು, ತಾಲೂಕು ಕ್ರೀಡಾಂಗಣ ಹಾಗೂ ಅರಣ್ಯ ಇಲಾಖೆ ಕಚೇರಿಗಳಿವೆ. ಹೀಗಾಗಿ ಅನುಕೂಲ ಆಗಲಿದೆ ಎಂದು ಮತ್ತೊಂದು ಗುಂಪಿನ ವಾದ.

ತಾಲೂಕು ಹೋರಾಟ: ನಾಲ್ಕು ದಶಕಗಳ ಹೋರಾಟದ ಫಲವಾಗಿ ಅಳ್ನಾವರವನ್ನು ತಾಲೂಕಾಗಿ 2017ರಲ್ಲಿ ಘೋಷಣೆ ಮಾಡಲಾಗಿದೆ. ಅಂದು ಸಹ ತಾಲೂಕು ನಿರ್ಮಾಣ ಸಮಯದಲ್ಲಿ 32 ಗ್ರಾಮಗಳನ್ನೊಳಗೊಂಡ ಅಳ್ನಾವರ ಹೋಬಳಿಯಲ್ಲಿರುವ ನಿಗದಿ ಭಾಗದ ಹಳ್ಳಿಗಳು ಅಳ್ನಾವರ ತಾಲೂಕಿನಲ್ಲಿ ಸೇರಲು ಇಚ್ಛಿಸಲಿಲ್ಲ. ಹೀಗಾಗಿ ಕಡಿಮೆ ಜನಸಂಖ್ಯೆ ಇರುವ ಕಾರಣಕ್ಕೆ ಅಳ್ನಾವರವನ್ನು ತಾಲೂಕು ಮಾಡಲು ಬರುವುದಿಲ್ಲ ಎನ್ನುವ ವಾದ ಸರ್ಕಾರದ್ದಾಗಿತ್ತು. ಆಗ ಸಂತೋಷ ಲಾಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ರಾಜ್ಯದಲ್ಲಿಯೇ ಸಣ್ಣ ತಾಲೂಕಾಗಿ ಘೋಷಿಸುವಂತೆ ಪಟ್ಟು ಹಿಡಿದು ಕೇವಲ 13 ಹಳ್ಳಿಗಳನ್ನೊಳಗೊಂಡ ಸಣ್ಣ ತಾಲೂಕಾಗಿ ಮಾಡಿದ್ದರು.

ಇದೀಗ ತಾಲೂಕು ಕಚೇರಿಗಳನ್ನೊಳಗೊಂಡ ಪ್ರಜಾಸೌಧ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ, ನಿರ್ಮಾಣ ಮಾಡುತ್ತಿರುವ ಸ್ಥಳದ ಬಗ್ಗೆ ಪರ- ವಿರೋಧ ವ್ಯಕ್ತವಾಗುತ್ತಿದೆ. ಸಂತೋಷ ಲಾಡ್‌ ಅವರೇ ಕೂಡಲೇ ಈ ಸಮಸ್ಯೆಗೆ ಇತ್ಯರ್ಥ ಹಾಡಬೇಕಿದೆ.

ಈಗಾಗಲೆ ನಿರ್ಮಿಸುತ್ತಿರುವ ಪ್ರಜಾಸೌಧ ಕಟ್ಟಡದ ಸ್ಥಳವನ್ನು ಬದಲಾಯಿಸಿ ಸಾರ್ವಜನಿಕರಿಗೆ, ರೈತರಿಗೆ ಅನುಕೂಲವಾಗುವಂತೆ ಪಟ್ಟಣಕ್ಕೆ ಹತ್ತಿರದ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ಇದರಿಂದ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿ ಕಂಬಳಿ ಹೇಳಿದರು.

----

30ಡಿಡಬ್ಲೂಡಿ2

ಅಳ್ನಾವರದಲ್ಲಿ ಪ್ರಜಾಸೌಧ ನಿರ್ಮಿಸಲು ಇತ್ತೀಚೆಗೆ ಸಚಿವ ಸಂತೋಷ ಲಾಡ್‌ ಭೂಮಿಪೂಜೆ ನೆರವೇರಿಸಿದ ಸ್ಥಳ.